ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯು ರೈತರಿಗೆ ಮರಣ ಶಾಸನ: ಪುಟ್ಟಸ್ವಾಮಿಗೌಡ

Last Updated 27 ಜುಲೈ 2020, 14:20 IST
ಅಕ್ಷರ ಗಾತ್ರ

ಕೋಲಾರ: ‘ಭ್ರಷ್ಟ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳ ಕಪ್ಪು ಹಣ ರಕ್ಷಿಸಲು ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ರೈತರಿಗೆ ಮರಣ ಶಾಸನವಾಗಿದೆ’ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್.ಪುಟ್ಟಸ್ವಾಮಿಗೌಡ ಕಿಡಿಕಾರಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಣವಂತರು 1961ರ ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ ಖರೀದಿಸಿರುವ ಜಮೀನುಗಳನ್ನು ಸಕ್ರಮಗೊಳಿಸುವ ಉದ್ದೇಶಕ್ಕೆ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿದೆ’ ಎಂದು ಆರೋಪಿಸಿದರು.

‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಗಾಮಿ ಪರಿಣಾಮ ಆಗಲಿದೆ. ಸರ್ಕಾರ ಧನಿಕರಿಗೆ ಜಮೀನು ಖರೀದಿಸಿ ತಮ್ಮ ಇಚ್ಛೆಗೆ ತಕ್ಕಂತೆ ಬಳಸುವ ಅಧಿಕಾರ ನೀಡಿದೆ. ಕೃಷಿಕರನ್ನು ಬೀದಿಪಾಲು ಮಾಡುವ ಹುನ್ನಾರ ಇದರ ಹಿಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೈಗಾರಿಕೆಗಳಿಗೆ ಜಮೀನು ಬೇಕು. ಕೃಷಿಯೇತರರು ಕೃಷಿಯಲ್ಲಿ ತೊಡಗಿ ಕೃಷಿ ಉತ್ಪನ್ನಗಳನ್ನು ಅಧಿಕ ಮಾಡಬೇಕು ಎಂದು ಸರ್ಕಾರ ಹೇಳುತ್ತದೆ. ಆದರೆ, ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ ೩೨ ಸಾವಿರ ಎಕರೆಗೂ ಹೆಚ್ಚು ಭೂಮಿಯಿದೆ. ಅಭಿವೃದ್ಧಿಪಡಿಸದ ೩೬ ಸಾವಿರ ಎಕರೆಗೂ ಹೆಚ್ಚು ಜಮೀನಿದೆ. ಈ ಜಮೀನನ್ನೇ ಕೈಗಾರಿಕೆಗಳಿಗೆ ಕೊಡಬಹುದು’ ಎಂದು ಹೇಳಿದರು.

ಆರ್ಥಿಕ ಅಸಮಾನತೆ: ‘ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಸಮಿತಿ ಮೂಲಕ ಕೈಗಾರಿಕೋದ್ಯಮಿಗಳು ಕೇಳಿದ ಜಾಗದಲ್ಲಿ ಜಮೀನು ಖರೀದಿಸಲು ಅನುಮತಿ ನೀಡಬಹುದು. ಸರ್ಕಾರದ ನಡೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಆದರೆ, ಪ್ರಬಲ ಹೋರಾಟ ಮಾಡುತ್ತಿಲ್ಲ. ಕಾಯ್ದೆ ತಿದ್ದುಪಡಿಯಿಂದ ಉಳ್ಳವರು ಆರ್ಥಿಕವಾಗಿ ಮತ್ತಷ್ಟು ಪ್ರಬಲರಾಗುತ್ತಾರೆ. ಬಡವರು ಶೋಷಣೆಗೆ ಬಲಿಯಾಗುತ್ತಾರೆ. ಇದರಿಂದ ಆರ್ಥಿಕ ಅಸಮಾನತೆ ಹೆಚ್ಚಿಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘದ ಪ್ರಾದೇಶಿಕ ಪದಾಧಿಕಾರಿಗಳಾದ ರೋಹನ್‌ಗೌಡ, ನಾರಾಯಣಸ್ವಾಮಿ, ಪ್ರಜ್ವಲ್‌ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT