ಶೋಕಾಸ್‌ ನೋಟಿಸ್ ಜಾರಿಗೆ ಆದೇಶ

7
ಸಾಲ ಗುರಿ ಸಾಧಿಸದ ಬ್ಯಾಂಕ್‌ಗಳು: ಸಭೆಯಲ್ಲಿ ಸಿಇಒ ಜಗದೀಶ್‌ ಕೆಂಡಾಮಂಡಲ

ಶೋಕಾಸ್‌ ನೋಟಿಸ್ ಜಾರಿಗೆ ಆದೇಶ

Published:
Updated:
Prajavani

ಕೋಲಾರ: ‘ಸಾಲ ವಿತರಣೆ ಗುರಿ ಸಾಧಿಸದ ಬ್ಯಾಂಕ್‌ಗಳಿಗೆ ಶೋಕಾಸ್‌ ನೋಟಿಸ್ ಜಾರಿ ಮಾಡಿ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅವರು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್‌ಗೆ ಆದೇಶಿಸಿದರು.

ಇಲ್ಲಿ ಬುಧವಾರ ನಡೆದ ವಿವಿಧ ಬ್ಯಾಂಕ್ ಅಧಿಕಾರಿಗಳ ಹಾಗೂ ಜಿಲ್ಲೆಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ. ಸಾಲ ಮಂಜೂರು ಮಾಡಲು ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು.

‘ಬ್ಯಾಂಕ್‌ಗಳ ಸಾಧನೆ ಅವಲೋಕಿಸಿದರೆ ಶ್ರೀಮಂತರಿಗೆ ಮಾತ್ರ ಹೆಚ್ಚು ಸಾಲ ನೀಡಿರುವಂತಿದೆ. ರೈತರಿಂದ ಠೇವಣಿ ಕಟ್ಟಿಸಿಕೊಂಡು ಅವರಿಗೆ ಸಾಲ ನೀಡದಿದ್ದರೆ ಏನು ಅರ್ಥ? ವಾಸ್ತವದಲ್ಲಿ ರೈತರೇ ಪ್ರಾಮಾಣಿಕವಾಗಿ ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಾರೆ’ ಎಂದರು.

‘ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಲ್ಲಿ ₹ 60.15 ಕೋಟಿ ಠೇವಣಿ ಇದೆ. ಆದರೆ, ಅಧಿಕಾರಿಗಳ ಸಾಲ ವಿತರಣೆ ಸಾಧನೆ ಶೇ 50ಕ್ಕಿಂತಲೂ ಕಡಿಮೆಯಿದೆ. ಬ್ಯಾಂಕ್‌ ಅಧಿಕಾರಿಗಳು ಜಿಲ್ಲೆಯಿಂದ ದುಡ್ಡು ದೋಚಿಕೊಂಡು ಹೋಗಲು ಬಂದಿದ್ದೀರಾ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ವರದಿ ಕಳುಹಿಸಿ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಯಮಾವಳಿ ಪ್ರಕಾರ ರೈತರಿಗೆ ಸಾಲ ನೀಡದ ಬ್ಯಾಂಕ್‌ಗಳಿಗೆ ನೋಟಿಸ್‌ ನೀಡಬೇಕು. ಬಳಿಕ ಬ್ಯಾಂಕ್‌ ಅಧಿಕಾರಿಗಳು ನೀಡಿದ ಪ್ರತಿಕ್ರಿಯೆ ಆಧರಿಸಿ ಆರ್‌ಬಿಐಗೆ ವರದಿ ಕಳುಹಿಸಿ. ಒಂದು ವೇಳೆ ನೀವು ಈ ಕೆಲಸ ಮಾಡದಿದ್ದರೆ ನಾನೇ ಸರ್ಕಾರಕ್ಕೆ ಪತ್ರ ಬರೆದು ಬ್ಯಾಂಕ್‌ಗಳನ್ನು ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಿಸುತ್ತೇನೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಇಲ್ಲಿನ ಸೌಕರ್ಯ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸದಿದ್ದರೆ ಬ್ಯಾಂಕ್‌ ಅಧಿಕಾರಿಗಳು ಇನ್ನೇನು ಕೆಲಸ ಮಾಡುತ್ತಾರೆ? ಅಧಿಕಾರಿಗಳು ಸಾಲ ನೀಡುವುದನ್ನು ಕೇವಲ ನಗರ ಪ್ರದೇಶಕ್ಕೆ ಸೀಮಿತ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಬಿಡುಗಡೆಯಾಗುವ ಯೋಜನೆಗಳಡಿ ಫಲಾನುಭವಿಗಳಿಗೂ ಸಾಲ ನೀಡಿಲ್ಲ. ಮತ್ತೆ ಇನ್ಯಾರಿಗೆ ಸೌಕರ್ಯ ಕಲ್ಪಿಸುತ್ತೀರಾ?’ ಎಂದು ಕೆಂಡಾಮಂಡಲರಾದರು.

ನೋಟಿಸ್‌ ಜಾರಿ ಬೇಡ: ‘ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರಿಗೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಬಾರದು’ ಎಂದು ಲೀಡ್‌ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್ ಸೂಚಿಸಿದರು.

‘ಸರ್ಕಾರವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದೆ. ಜತೆಗೆ ರೈತರ ಬೆಳೆ ಸಾಲ ಮನ್ನಾ ಮಾಡಿದ್ದು, ಈ ಸೌಕರ್ಯ ರೈತರಿಗೆ ಸಮರ್ಪಕವಾಗಿ ತಲುಪಬೇಕು. ರೈತರಿಂದ ದೂರು ಬಂದರೆ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಸಿದರು.

ಹಿಂದೇಟು ಹಾಕುತ್ತಾರೆ: ‘ಬ್ಯಾಂಕ್‌ ಅಧಿಕಾರಿಗಳು ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಾರೆ’ ಎಂದು ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶು ಸಂಗೋಪನೆ ಇಲಾಖೆ, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ‘ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್ ಅಧಿಕಾರಿಗಳು ಸಾಲ ಗುರಿ ಸಾಧನೆ ಮಾಡಬೇಕು. ಸಾಲ ಮಂಜೂರು ಮಾಡಿರುವ ಕುರಿತು ಪಟ್ಟಿ ಸಮೇತ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳಿಗೂ ಸಾಲ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಅರ್ಜಿ ತಿರಸ್ಕೃತಗೊಳಿಸಿದರೆ ಅದಕ್ಕೆ ಕಾರಣ ನೀಡಬೇಕು. ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡವರಿಗೂ ಸಾಲ ನೀಡದಿದ್ದರೆ ಇದಕ್ಕೆ ಅರ್ಥವಿದೆಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಬಿಐ ಅಧಿಕಾರಿ ಬಾಲಚಂದ್ರ, ನಬಾರ್ಡ್‌ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜ್, ಗ್ರಾಮೀಣ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿಚಂದ್ರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !