ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್ ಬಡ್ಡಿ ದಂಧೆ ವಿರುದ್ದ ಆಂದೋಲನ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ
Last Updated 10 ಸೆಪ್ಟೆಂಬರ್ 2019, 15:32 IST
ಅಕ್ಷರ ಗಾತ್ರ

ಕೋಲಾರ: ‘ಬ್ಯಾಂಕ್‌ನಿಂದ ಪ್ರತಿ ಮನೆಗೂ ಸಾಲ ತಲುಪಿಸುವ ಮೂಲಕ ಮೀಟರ್ ಬಡ್ಡಿ ದಂಧೆ ವಿರುದ್ದ ಬೃಹತ್ ಆಂದೋಲನ ಕೈಗೊಳ್ಳುವ ಅಗತ್ಯವಿದೆ’ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಮಂಗಳವಾರ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್‌ ವಿತರಿಸಿ ಮಾತನಾಡಿ, ‘ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಬ್ಯಾಂಕ್‌ನ ಆರ್ಥಿಕ ವ್ಯವಸ್ಥೆ ಸುಧಾರಿಸಿದೆ. ಅಲ್ಲದೇ, ರೈತರು ಹಾಗೂ ಮಹಿಳೆಯರಿಗೆ ಸಾವಿರಾರು ಕೋಟಿ ಸಾಲ ನೀಡಲಾಗಿದೆ. ಆದರೆ, ಕೆಲವರು ಬ್ಯಾಂಕ್‌ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಗುಡುಗಿದರು.

‘ಬ್ಯಾಂಕ್‌ ವಿರುದ್ಧ ಟೀಕೆ ಮಾಡುವವರ ಬಗ್ಗೆ ಮಾತನಾಡುವುದಿಲ್ಲ. ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಬ್ಯಾಂಕ್‌ ಉಳಿಸಿರುವ ಬಡವರು ಮತ್ತು ಮಹಿಳೆಯರನ್ನು ನಂಬಿದ್ದೇವೆ. ಮಹಿಳೆಯರನ್ನು ನಂಬಿ ಸಾಲ ಕೊಡುತ್ತಿದ್ದೇವೆ. ಮಹಿಳೆಯರೇ ಈ ಬ್ಯಾಂಕ್‌ ಕಟ್ಟಿ ಬೆಳೆಸಿದ್ದಾರೆ. ಮಹಿಳೆಯರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ಮತ್ತಷ್ಟು ಮಂದಿಗೆ ಸಾಲ ಸಿಗುವಂತೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಮಹಿಳೆಯರು ದಲ್ಲಾಳಿಗಳಿಂದ ವಂಚನೆಗೆ ಒಳಗಾಗಬಾರದೆಂದು ಬಹಿರಂಗವಾಗಿ ಸಾಲ ನೀಡುತ್ತಿದ್ದೇವೆ. ಸಾಲ ಬೇಕಿದ್ದರೆ ದಲ್ಲಾಳಿಗಳಿಗೆ ಲಂಚ ಅಥವಾ ಕಮಿಷನ್ ಕೊಡಬಾರದು. ನೇರವಾಗಿ ಬ್ಯಾಂಕ್‌ನೊಂದಿಗೆ ವ್ಯವಹರಿಸಬೇಕು. ಯಾರಾದರೂ ಕಮಿಷನ್‌ ಅಥವಾ ಲಂಚ ಕೇಳಿದರೆ ನಮ್ಮ ಗಮನಕ್ಕೆ ತನ್ನಿ’ ಎಂದು ಮನವಿ ಮಾಡಿದರು.

ಇತಿಹಾಸ ಅರಿಯಲಿ: ‘ಆಡಳಿತ ಮಂಡಳಿ ವಿರುದ್ಧ ಮಾತನಾಡುವವರು ಮೊದಲು ಬ್ಯಾಂಕ್‌ನ ಇತಿಹಾಸ ಅರಿಯಬೇಕು. 7 ವರ್ಷಗಳ ಹಿಂದೆ ಬ್ಯಾಂಕ್ ದಿವಾಳಿಯಾಗಿ ಬೆಂಗಳೂರು ಡಿಸಿಸಿ ಬ್ಯಾಂಕ್‌ನ ಜತೆ ವಿಲೀನವಾಗುವ ಸ್ಥಿತಿ ತಲುಪಿತ್ತು. ಟೀಕಾಕಾರರಿಗೆ ಈ ಸಂಗತಿ ಗೊತ್ತಿಲ್ಲವೇ?’ ಎಂದು ಬ್ಯಾಂಕ್‌ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಕಿಡಿಕಾರಿದರು.

‘ದಿವಾಳಿಯಾಗಿ ಠೇವಣಿ ಹಣ ಹಿಂದಿರುಗಿಸಲಾಗದ ಸ್ಥಿತಿಯಲ್ಲಿದ್ದ ಬ್ಯಾಂಕ್ ಈಗ ಸಾವಿರ ಕೋಟಿ ಸಾಲ ನೀಡುವ ಮಟ್ಟಿಗೆ ಬೆಳೆಯಲು ನೂತನ ಆಡಳಿತ ಮಂಡಳಿಯೇ ಕಾರಣ. ಟೀಕಾಕಾರರು ಮೊದಲು ಈ ಸತ್ಯ ಅರಿತು ಮಾತನಾಡಲಿ’ ಎಂದು ಹೇಳಿದರು.

ಗಂಟೆಗಟ್ಟಲೇ ಕಾಯಬೇಕು: ‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣ ಪಡೆಯಲು ಗಂಟೆಗಟ್ಟಲೇ ಕಾಯಬೇಕು. ಆದರೆ, ಡಿಸಿಸಿ ಬ್ಯಾಂಕ್ ಜನರ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿದೆ. ಡಿಸಿಸಿ ಬ್ಯಾಂಕ್ ಕುಟುಂಬವೆಂದು ಭಾವಿಸಿ ಸಾಲದ ಹಣ ಸದ್ಭಳಕೆ ಮಾಡಿಕೊಳ್ಳಿ ಮತ್ತು ಸಕಾಲಕ್ಕೆ ಮರುಪಾವತಿಸಿ’ ಎಂದು ಬ್ಯಾಂಕ್‌ ನಿರ್ದೇಶಕ ಸೊಣ್ಣೇಗೌಡ ಸಲಹೆ ನೀಡಿದರು.

‘ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕ್‌ಗೆ ಗೋವಿಂದಗೌಡರು ಜೀವ ತುಂಬಿದ್ದಾರೆ. ಇಂತಹ ಒಳ್ಳೆಯ ಕೆಲಸವನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು. ಬಡ ಮಹಿಳೆಯರು ಮತ್ತು ರೈತರಿಗೆ ನೆರವಾಗುತ್ತಿರುವ ಬ್ಯಾಂಕ್ ವಿರುದ್ಧ ರಾಜಕೀಯ ದುರುದ್ದೇಶಕ್ಕೆ ಟೀಕೆ ಮಾಡುವುದು ಸರಿಯಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ತಿಳಿಸಿದರು.

14 ಮಹಿಳಾ ಸ್ವಹಾಯ ಸಂಘಗಳ ಸದಸ್ಯರಿಗೆ ಹರಿಶಿನ ಕುಂಕುಮ, ಹೂವು ಹಾಗೂ ತಾಂಬೂಲದ ಜತೆ ₹ 56 ಲಕ್ಷ ಸಾಲ ವಿತರಿಸಲಾಯಿತು. ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ನಿರ್ದೇಶಕ ಗೋಪಾಲ್, ಛತ್ರಕೋಡಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT