ಬುಧವಾರ, ಏಪ್ರಿಲ್ 14, 2021
26 °C
ಎಫ್‌ಡಿಎ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಅಭ್ಯರ್ಥಿಗಳ ಆರೋಪ

ಕೆಪಿಎಸ್‌ಸಿ ವಿರುದ್ಧ ಆಕ್ರೋಶ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪರೀಕ್ಷೆ ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿ ಅಭ್ಯರ್ಥಿಗಳು ಮತ್ತು ವಿವೇಕ್ ಇನ್ಫೋಟೆಕ್‌ ಸಂಸ್ಥೆ ಸದಸ್ಯರು ಇಲ್ಲಿ ಬುಧವಾರ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.

‘ಜ.24ರಂದು ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ರದ್ದುಪಡಿಸಿ ಮುಂದೂಡಲಾಗಿತ್ತು. ಫೆ.28ರಂದು ನಡೆದ ಲಿಖಿತ ಪರೀಕ್ಷೆಯ ಕೀ ಉತ್ತರಗಳು ವಿಜಯಪುರದಲ್ಲಿ ಮೊದಲೇ ದೊರಕಿವೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಈ ಹಿಂದೆ ಎಫ್‌ಡಿಎ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಆದರೆ, ತನಿಖೆ ಪೂರ್ಣಗೊಳ್ಳುವ ಮುನ್ನವೇ ಎಫ್‌ಡಿಎ ಪರೀಕ್ಷೆ ನಡೆಸಲಾಗಿದೆ. ವಿಜಯಪುರದ ಜೆಎಸ್‌ಎಸ್ ಕಾಲೇಜು ಪರೀಕ್ಷಾ ಕೇಂದ್ರದ ಡಿ ಗ್ರೂಪ್‌ ನೌಕರನೊಬ್ಬ 96 ಅಂಕಗಳಿಗೆ ಸಿದ್ಧಪಡಿಸಿದ ಉತ್ತರಗಳ ಚೀಟಿಯನ್ನು ಕೇಂದ್ರದಲ್ಲಿ ಅಭ್ಯರ್ಥಿಗೆ ಕೊಟ್ಟಿದ್ದಾನೆ’ ಎಂದು ವಿವೇಕ್‌ ಇನ್ಫೋಟೆಕ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್‌ಕುಮಾರ್ ದೂರಿದರು.

‘ವಿಜಯಪುರದಲ್ಲಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಪೂರ್ವ ಯೋಜನೆಯಂತೆ ಉತ್ತರಗಳನ್ನು ಸಣ್ಣ ಚೀಟಿಯಲ್ಲಿ ಬರೆದು ಕುಡಿಯುವ ನೀರು ಕೊಡುವ ನೆಪದಲ್ಲಿ ಕೇಂದ್ರದೊಳಗೆ ಹೋಗಿ ನಿಗದಿಪಡಿಸಿದ ಅಭ್ಯರ್ಥಿಗೆ ನೀಡಲಾಗಿದೆ. ಡಿ ಗ್ರೂಪ್‌ ನೌಕರನಿಂದಲೇ ಇತರೆ ಅಭ್ಯರ್ಥಿಗಳಿಗೂ ಕೀ ಉತ್ತರಗಳು ತಲುಪಿರುವ ಸಾಧ್ಯತೆಯಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಅಭ್ಯರ್ಥಿಗಳಿಗೆ ಅನ್ಯಾಯ: ‘ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಲೇ ಇವೆ. ಸರ್ಕಾರಿ ಉದ್ಯೋಗಕ್ಕಾಗಿ ಹಗಲಿರುಳು ಕಷ್ಟಪಟ್ಟು ಓದುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಪರೀಕ್ಷಾ ಅಕ್ರಮದ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಪ್ರಶ್ನೆಪತ್ರಿಕೆ ಸೋರಿಕೆಗೆ ಕೆಪಿಎಸ್‌ಸಿಯೇ ಹೊಣೆ. ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಕೆಪಿಎಸ್‌ಸಿ ಯಾವುದೇ ನೇಮಕಾತಿ ಪರೀಕ್ಷೆ ನಡೆಸಬಾರದು. ಹಲವು ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು. ಫೆ.28ರಂದು ನಡೆದಿರುವ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಜಿ.ಮುರಳಿ, ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಕೇಶ್, ಅಭ್ಯರ್ಥಿಗಳಾದ ವಿ.ರಾಜಕುಮಾರ್, ಕೆ.ವಿ.ಶಶಿಕುಮಾರ್‌, ಜಿ.ಎಸ್.ಗೋಪಾಲಕೃಷ್ಣ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.