ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಾಯುಕ್ತ, ಸಿಬ್ಬಂದಿ ವಿರುದ್ಧ ಆಕ್ರೋಶ

ಕಾರ್ಯವೈಖರಿಗೆ ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಅಸಮಾಧಾನ
Last Updated 31 ಮಾರ್ಚ್ 2022, 4:12 IST
ಅಕ್ಷರ ಗಾತ್ರ

ಕೆಜಿಎಫ್‌: ‘ನಗರಸಭೆ ಸಿಬ್ಬಂದಿ ಅಂಕೆ ತಪ್ಪಿ ನಡೆಯುತ್ತಿದ್ದು, ಪೌರಾಯುಕ್ತರ ಸಮೇತ ಎಲ್ಲರೂ ನಿಷ್ಪ್ರಯೋಜಕರಾಗಿದ್ದಾರೆ’ ಎಂದು ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ರಾಬರ್ಟಸನ್‌ಪೇಟೆ ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸಿಬ್ಬಂದಿ ಹೇಳಿದ ಮಾತನ್ನು ಕೇಳುತ್ತಿಲ್ಲ. ಇವರು ಮಾಡುವ ಕೆಲಸದಿಂದ ನಾವು ವಾರ್ಡ್‌ಗಳಲ್ಲಿ ತಲೆ ಎತ್ತಿ ತಿರುಗುವ ಹಾಗಿಲ್ಲ. ಮುಂದಿನ ಸಭೆಯಲ್ಲಿ ಸಿಬ್ಬಂದಿ ಬಗ್ಗೆ ವಿವರವಾಗಿ ಚರ್ಚಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

‘ನಮ್ಮ ಆರೋಗ್ಯಾಧಿಕಾರಿಗೆ ಧಮ್‌ ಇಲ್ಲ. ಧೈರ್ಯವೂ ಇಲ್ಲ. ಧೈರ್ಯ ಇಲ್ಲದವರು ನಗರಸಭೆಯಲ್ಲಿ ಕೆಲಸ ಮಾಡಬಾರದು. ಅನಧಿಕೃತವಾಗಿ ಹಾಕಿದ ಬ್ಯಾನರ್‌ ತೆಗೆಯಲು ಆಗಲಿಲ್ಲ. ನಾನು ಎಚ್ಚರಿಕೆ ಕೊಟ್ಟ ಮೇಲೆ ತೆಗೆಯುವ ಮಟ್ಟಿಗೆ ಬಂದಿದ್ದಾರೆ. ಫುಟ್‌ಪಾತ್‌ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡುತ್ತೇನೆ. ಬಸ್‌ ನಿಲ್ದಾಣದಲ್ಲಿ ಜೂಸ್ ಅಂಗಡಿ ಮುಂದೆ ನಗರಸಭೆ ಕಲ್ಲು ಹಾಕಿದರೆ ಅದನ್ನು ಒಡೆದು ಹಾಕುತ್ತಾರೆ. ಮಾಜಿ ಶಾಸಕರು ಈ ವ್ಯವಹಾರದಲ್ಲಿ ಮೂಗು ತೂರಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇ–ಖಾತೆ, ವ್ಯಾಪಾರ ಲೈಸೆನ್ಸ್‌ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಧಿಕಾರಿಗಳು ಏನು ಮಾಡ್ತಾರೋ ಗೊತ್ತಿಲ್ಲ. ಹೆಚ್ಚು ಕಡಿಮೆಯಾದರೆ ನಮ್ಮ ಮೇಲೆ ಬರುತ್ತದೆ. ಮೂರ್ನಾಲ್ಕು ವರ್ಷ ವಾದರೂ ಇ–ಖಾತೆ ಅರ್ಜಿ ವಿಲೇವಾರಿ ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.

ಸದಸ್ಯ ಜಯಪಾಲ್‌, ‘ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಆದರೆ, ಶಾಸಕರ ಮಾತನ್ನು ಕೂಡ ಅಧಿಕಾರಿಗಳು ಕೇಳುತ್ತಿಲ್ಲ. ಬಿಜೆಪಿಯ ಮಾಜಿ ಶಾಸಕರ ಕೈಬೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರು ಮೂಕಪ್ರೇಕ್ಷಕರಾಗಿದ್ದಾರೆ’ ಎಂದು ಟೀಕಿಸಿದರು.

ಸದಸ್ಯ ಎಸ್. ರಾಜೇಂದ್ರನ್‌, ‘ಅಧ್ಯಕ್ಷರ ಮಾನ ಮರ್ಯಾದೆ ಮುಖ್ಯ. ನಗರಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಮಾಜಿ ಶಾಸಕರ ಬ್ಯಾನರ್ ತೆಗೆಯಲ್ಲ. ಬೇರೆಯವರ ಬ್ಯಾನರ್ ತೆಗೆಯುತ್ತಾರೆ. ಏಳು ದಿನವಾದರೂ ನಮಗೆ ಬ್ಯಾನರ್ ಹಾಕಲು ಅನುಮತಿ ನೀಡಿಲ್ಲ’ ಎಂದರು.

‘ಅಕ್ರಮವಾಗಿ ಬ್ಯಾನರ್ ಹಾಕಿದವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಕೆಜಿಎಫ್ ಜನರೇನು ದಡ್ಡರಲ್ಲ. ಸೂರಜ್‌ಮಲ್‌ ವೃತ್ತದಲ್ಲಿ ಬ್ಯಾನರ್ ಹಾಕಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಪೌರಾಯುಕ್ತರನ್ನು ಪ್ರಶ್ನಿಸಿದರು.

‘ಸಾರ್ವಜನಿಕ ಶೌಚಾಲಯವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಕಟ್ಟುತ್ತಿದ್ದಾರೆ. ಕಟ್ಟಡ ಕಟ್ಟುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಅದಕ್ಕೆ ಅನುಮತಿ ಕೊಟ್ಟವರಾರು ಎಂಬ ಬಗ್ಗೆ ಮಾಹಿತಿ ಕೊಡಿ. ಅನಧಿಕೃತವಾದರೆ ಒಡೆದು ಹಾಕಿ’ ಎಂದು ಸದಸ್ಯರಾದ ಜರ್ಮನ್ ಜೂಲಿಯಸ್‌ ಮತ್ತು ಶಿವಾಜಿ ಒತ್ತಾಯಿಸಿದರು.

‘ನಮ್ಮ ವಾರ್ಡ್‌ಗೆ ಕಸ ಒಯ್ಯಲು ಆಟೊ ಬರುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು ಸದಸ್ಯ ಸೆಂಥಿಲ್ ಕುಮಾರ್‌ ತಿಳಿಸಿದರು.

‘ನಗರಸಭೆಯಲ್ಲಿ ದೌರ್ಜನ್ಯ ಮಾಡಿಕೊಂಡು ಕೆಲವು ಸದಸ್ಯರು ಖಾತೆ ಮಾಡುತ್ತಿದ್ದಾರೆ ಎಂಬ ದೂರು ಜಿಲ್ಲಾಧಿಕಾರಿಗೆ ಹೋಗಿದೆ. ಇಂತಹ ಸದಸ್ಯರನ್ನು ಅನರ್ಹಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಎಸಿಬಿ ದಾಳಿ ನಂತರ ಸಕಾಲ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ’ ಎಂದು ಪೌರಾಯುಕ್ತ ನವೀನ್‌ ಚಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT