ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲೋತ್ಪನ್ನ ಬೆಲೆ ಏರಿಕೆಗೆ ಆಕ್ರೋಶ: ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾಕಾರರ ಬೈಕ್‌ ರ್‌್ಯಾಲಿ: ಪ್ರಧಾನಿ ಮೋದಿ ವಿರುದ್ಧ ಘೋಷಣೆ
Last Updated 2 ಮಾರ್ಚ್ 2021, 15:28 IST
ಅಕ್ಷರ ಗಾತ್ರ

ಕೋಲಾರ: ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನವ ಕರ್ನಾಟಕ ಸ್ವಾಭಿಮಾನ ವೇದಿಕೆ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಗಾಂಧಿವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್‌ ರ್‌್ಯಾಲಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರು ಗತಿಯಲ್ಲಿ ಸಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರವು ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್‌.ರಾಮಾಂಜನಪ್ಪ ದೂರಿದರು.

‘ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ತೈಲೋತ್ಪನ್ನಗಳ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮಾಡಲಾಗಿದೆ. ಸರ್ಕಾರಕ್ಕೆ ಜನಸಾಮಾನ್ಯರ ಆರ್ಥಿಕ ಸಂಕಷ್ಟದ ಅರಿವಿಲ್ಲ’ ಎಂದು ಆರೋಪಿಸಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಮೇಲಿನ ಸೆಸ್ ಕಡಿಮೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿಕೊಂಡೇ ಜೀವನ ನಡೆಸುತ್ತಿದ್ದಾರೆ. ಜನರ ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ, ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದರು.

ಜನಪರ ಕಾಳಜಿಯಿಲ್ಲ: ‘ಪ್ರಧಾನಿ ಮೋದಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಪರ ಕಾಳಜಿಯಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಸಣ್ಣ ವ್ಯಾಪಾರಿಗಳು ಹಾಗೂ ಉದ್ದಿಮೆದಾರರು ಬೀದಿ ಪಾಲಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ. ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರದ ದುರಾಡಳಿತದಿಂದ ಬೇಸತ್ತಿರುವ ಜನ ಹಿಡಿಶಾಪ ಹಾಕುತ್ತಿದ್ದಾರೆ. ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸದಿದ್ದರೆ ಮತ್ತಷ್ಟು ಕಷ್ಟದ ದಿನಗಳು ಎದುರಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೀದಿಗಿಳಿದು ಹೋರಾಟ: ‘ಕೇಂದ್ರ ಸರ್ಕಾರ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬೇಕು. ತೈಲೋತ್ಪನ್ನ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಾಸಿರ್‌ ಹುಸೇನ್, ಕಾನೂನು ಸಲಹೆಗಾರ ಸತೀಶ್‌ಕುಮಾರ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಇಮ್ರಾನ್ ಫರ್ವಿಜ್‌, ಉಪಾಧ್ಯಕ್ಷ ಬಸವರಾಜ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶುಭಮಂಗಳಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT