ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಬಿತ್ತನೆ ರಾಗಿ ಪೂರೈಕೆಗೆ ಆಕ್ರೋಶ

30 ದಿನಕ್ಕೆ ತೆನೆ ಕಟ್ಟಿದ ಬೆಳೆ: ಮುಳಬಾಗಿಲು ತಾಲ್ಲೂಕು ರೈತರ ಕಂಗಾಲು
Last Updated 2 ಅಕ್ಟೋಬರ್ 2022, 5:18 IST
ಅಕ್ಷರ ಗಾತ್ರ

ಮುಳಬಾಗಿಲು: ಕಳಪೆ ಬಿತ್ತನೆ ರಾಗಿ ಬೀಜ ವಿತರಣೆ ಮಾಡಿರುವ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಷ್ಟವಾಗಿರುವ ಪ್ರತಿ ಎಕರೆಗೆ ₹ 1 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ಮುಂಗಾರು ಮಳೆ ಆರ್ಭಟಕ್ಕೆ ರೈತರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ಖಾಸಗಿ ಸಾಲಕ್ಕೆ ಸಿಲುಕಿ ಪರದಾಡುತ್ತಿರುವ ಸಮಯದಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ರಾಗಿ ಬಿತ್ತನೆ ಸಮಯದಲ್ಲಿ ಕಳಪೆ ಬಿತ್ತನೆ ಬೀಜ ವಿತರಿಸಲಾಗಿದೆ. ಸರ್ಕಾರಿ ಬೀಜ ನಿಗಮದಿಂದಲೇ ಸರಬರಾಜು ಮಾಡಲಾಗಿದೆ. ಕೃಷಿ ಇಲಾಖೆಯು ರೈತರ ಮರಣ ಶಾಸನ ಬರೆಯುತ್ತಿದೆ ಎಂದು ಕೃಷಿ ಸಚಿವರ ವಿರುದ್ಧ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಮಳೆಯಾಶ್ರಿತ ರಾಗಿ ಬೆಳೆ ಸಾಮಾನ್ಯವಾಗಿ 90 ದಿನಗಳ ನಂತರ ತೆನೆ ಕಟ್ಟುತ್ತದೆ. ಆದರೆ, ಹೆಬ್ಬಾಳ ಬೀಜ ನಿಗಮದಿಂದ ವಿತರಣೆಯಾಗಿರುವ ಹೊಸ ತಳಿಯ (ವಿಎಲ್ 376) ರಾಗಿ ಬಿತ್ತನೆ ಮಾಡಿದ 30 ದಿನಕ್ಕೆ ತೆನೆ ಬರುವ ಮೂಲಕ ಸಂಪೂರ್ಣವಾಗಿ ಬೆಳೆ ನೆಲಕಚ್ಚಿದೆ. ಇದರಿಂದ ವರ್ಷದ ಗಂಜಿಗೆ ಕನ್ನ ಬಿದ್ದಂತಾಗಿದೆ ಎಂದು ಆರೋಪಿಸಿದರು.

ಸಾವಿರಾರು ರೂಪಾಯಿ ಖಾಸಗಿ ಸಾಲ ಮಾಡಿ ಗೊಬ್ಬರ, ಕೂಲಿ ನೀಡಿ ಬಿತ್ತನೆ ಮಾಡಿದ್ದ ರಾಗಿ ಬೆಳೆ ಕೈಕೊಟ್ಟಿದೆ. ದಿಕ್ಕುತೋಚದೆ ರೈತರು ಕಂಗಾಲಾಗಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಹೊಸ ತಳಿಯ ರಾಗಿಯನ್ನು ಸಬ್ಸಿಡಿ ದರದಲ್ಲಿ ನೀಡದೆ ಉಚಿತವಾಗಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ನೀಡಿದ್ದೇವೆ ಎನ್ನುತ್ತಿದ್ದಾರೆ. ರೈತರಿಗೆ ಪರಿಹಾರ ನೀಡುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆಂದು ಸಬೂಬು ಹೇಳುತ್ತಾರೆ ಎಂದು ಕಿಡಿಕಾರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ಶುಭ, ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್‌ ಪಾಷ, ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಿ ಮಂಜು, ರಾಜೇಶ್, ಜುಬೇರ್‌ ಪಾಷ, ಸುನಿಲ್ ಕುಮಾರ್, ವಿಶ್ವ, ಭಾಸ್ಕರ್, ಆದಿಲ್ ಪಾಷ, ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಅಂಬ್ಲಿಕಲ್ ಮಂಜುನಾಥ್, ಹೆಬ್ಬಣಿ ಆನಂದ್‌ರೆಡ್ಡಿ, ನವೀನ್, ವೇಣು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT