ಗುರುವಾರ , ನವೆಂಬರ್ 26, 2020
21 °C
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಶೇ 25ರಷ್ಟು ಆದಾಯ ಕುಸಿತ

ಕೋಲಾರ ಎಪಿಎಂಸಿಯಲ್ಲಿ ಹೊರ ಗುತ್ತಿಗೆ ನೌಕರರ ಸೇವೆ ಮೊಟಕು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳಿಗೆ ಆದಾಯದ ಹರಿವು ಕಡಿಮೆಯಾಗಿದ್ದು, ಆರ್ಥಿಕ ಹೊರೆ ತಗ್ಗಿಸಲು ಕೃಷಿ ಮಾರಾಟ ಇಲಾಖೆಯು ಹೊರ ಗುತ್ತಿಗೆ ನೌಕರರ ಪೈಕಿ ಅರ್ಧದಷ್ಟು ಮಂದಿಯನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ.

ರಾಜ್ಯದಲ್ಲಿ ಒಟ್ಟಾರೆ 162 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿದ್ದು, ಎಪಿಎಂಸಿಗಳ ಆದಾಯಕ್ಕೆ ಅನುಗುಣವಾಗಿ ಹೊರ ಗುತ್ತಿಗೆ ಆಧಾರದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ.

ಭದ್ರತೆ, ಸ್ವಚ್ಛತಾ ಕಾರ್ಯ, ಶುಲ್ಕ ಸಂಗ್ರಹಣೆ ಕೆಲಸ ನಿರ್ವಹಿಸುತ್ತಿರುವ ಈ ನೌಕರರ ವೇತನಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದ ರೂಪದಲ್ಲಿ ಎಪಿಎಂಸಿಗಳಿಗೆ ಬರುತ್ತಿದ್ದ ಆದಾಯದಲ್ಲೇ ಈ ನೌಕರರಿಗೆ ವೇತನ ಪಾವತಿಸಲಾಗುತ್ತಿತ್ತು.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮುನ್ನ ಎಪಿಎಂಸಿ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕ (ಸೆಸ್‌) ಸಂಗ್ರಹಿಸಲು ಅವಕಾಶವಿತ್ತು.

ಕಾಯ್ದೆ ತಿದ್ದುಪಡಿ ನಂತರ ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್‌ ಸಂಗ್ರಹಿಸಲು ಆಡಳಿತ ಮಂಡಳಿಗೆ ಅವಕಾಶ ಇಲ್ಲವಾಗಿದೆ. ಸೆಸ್‌ ಸಂಗ್ರಹಣೆಯು ಮಾರುಕಟ್ಟೆ ಪ್ರಾಂಗಣದೊಳಗಿನ ವಹಿವಾಟಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಕಳೆದ 3 ತಿಂಗಳಲ್ಲಿ ಎಪಿಎಂಸಿಗಳ ಆದಾಯ ಶೇ 25ರಷ್ಟು ಕುಸಿದಿದೆ.

ಹೊರಬಿದ್ದ ಆದೇಶ: ಆದಾಯ ಕುಸಿತದ ಕಾರಣಕ್ಕೆ ಎಪಿಎಂಸಿಗಳ ಖರ್ಚು ವೆಚ್ಚ ಕಡಿಮೆ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಕೃಷಿ ಮಾರಾಟ ಇಲಾಖೆಯು ಹೊರ ಗುತ್ತಿಗೆ ನೌಕರರ ಸೇವೆಯಲ್ಲಿ ಶೇ 50ರಷ್ಟು ಕಡಿತಗೊಳಿಸುವಂತೆ ಎಪಿಎಂಸಿಗಳಿಗೆ ಆದೇಶ ಹೊರಡಿಸಿದೆ.

ಎಪಿಎಂಸಿ ಪ್ರಾಂಗಣದಲ್ಲಿನ ವಿದ್ಯುತ್‌ ಮತ್ತು ಉದ್ಯಾನ ನಿರ್ವಹಣೆ, ಬೆರಳಚ್ಚುಗಾರರು, ಪ್ಲಂಬರ್‌, ಡಾಟಾ ಆಪರೇಟರ್‌ ಸೇರಿದಂತೆ ವಿವಿಧ ಸೇವೆಗಳಿಗೆ ಪಡೆಯುವ ಹೊರ ಗುತ್ತಿಗೆ ನೌಕರರ ಸಂಖ್ಯೆ ಒಂದಕ್ಕಿಂತ ಹೆಚ್ಚು ಇರಬಾರದು ಎಂದು ಆದೇಶಿಸಲಾಗಿದೆ.

ಈ ಆದೇಶದನ್ವಯ ಜಿಲ್ಲೆಯ ಬಂಗಾರಪೇಟೆ ಮತ್ತು ಮಾಲೂರು ಎಪಿಎಂಸಿಗಳಲ್ಲಿ ಈಗಾಗಲೇ ಹೊರ ಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ನೌಕರರನ್ನು ಕೆಲಸದಿಂದ ಕೈಬಿಡುವ ಸಂಬಂಧ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿಲ್ಲ. ಹೀಗಾಗಿ ಎಪಿಎಂಸಿ ಆಡಳಿತ ಮಂಡಳಿಯು ಸೇವಾ ಹಿರಿತನದ ಆಧಾರದಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು