ಗುರುವಾರ , ಜೂಲೈ 9, 2020
29 °C
ಕೊರೊನಾ ಸೋಂಕು ಪತ್ತೆ ನಂತರವೂ ಟೊಮೆಟೊ ಹರಾಜು

ಮಂಡಿ ಮಾಲೀಕರ ಬೇಜವಾಬ್ದಾರಿ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಎಪಿಎಂಸಿಯಲ್ಲಿನ ಸಿಎಂಆರ್‌ ಮಂಡಿ ನೌಕರನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾದ ನಂತರವೂ ಮಂಡಿ ಮಾಲೀಕರು ಬೇಜವಾಬ್ದಾರಿ ತೋರಿ ಗುರುವಾರ ಟೊಮೆಟೊ ಹರಾಜು ಪ್ರಕ್ರಿಯೆ ನಡೆಸಿದ್ದು, ಆತಂಕ ಹೆಚ್ಚಿಸಿದೆ.

ಮಂಡಿ ವ್ಯವಸ್ಥಾಪಕರಿಗೆ ಸೋಂಕು ಇರುವುದು ಬುಧವಾರ ಪತ್ತೆಯಾಗಿತ್ತು. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಅವರನ್ನು ಕ್ವಾರಂಟೈನ್‌ ಮಾಡಿ 2 ದಿನಗಳ ಕಾಲ ಮಂಡಿ ಬಂದ್‌ ಮಾಡುವಂತೆ ಸೂಚಿಸಿದ್ದರು. ಆದರೆ, ಮಂಡಿ ಮಾಲೀಕರು ಈ ಸೂಚನೆ ಲೆಕ್ಕಿಸದೆ ಗುರುವಾರ ಟೊಮೆಟೊ ಹರಾಜು ಪ್ರಕ್ರಿಯೆ ನಡೆಸಿದ್ದಾರೆ.

ಸೋಂಕಿತ ವ್ಯವಸ್ಥಾಪಕರ ಜತೆ ಮಂಡಿ ಮಾಲೀಕರು ಹಾಗೂ ಕೆಲಸಗಾರರು ಸಂಪರ್ಕಕ್ಕೆ ಬಂದಿರುವುದು ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಗೊತ್ತಾಗಿತ್ತು. ಹೀಗಾಗಿ ಕೆಲಸಗಾರರನ್ನು ಬುಧವಾರವೇ ಕ್ವಾರಂಟೈನ್‌ ಮಾಡಿತ್ತು. ಆದರೆ, ಮಂಡಿ ಮಾಲೀಕರನ್ನು ಕ್ವಾರಂಟೈನ್‌ ಮಾಡಿರಲಿಲ್ಲ. ಸಿಎಂಆರ್‌ ಮಂಡಿಯು ಎಪಿಎಂಸಿಯಲ್ಲಿ ಅತಿ ದೊಡ್ಡ ಮಂಡಿಯಾಗಿದ್ದು, ನೂರಾರು ರೈತರು, ವರ್ತಕರು ಹಾಗೂ ದಲ್ಲಾಳಿಗಳು ಗುರುವಾರ ಟೊಮೆಟೊ ಹರಾಜಿನಲ್ಲಿ ಭಾಗಿಯಾಗಿರುವುದು ಆತಂಕ ಹೆಚ್ಚಿಸಿದೆ.

ಡಿ.ಸಿ ಸಿಡಿಮಿಡಿ: ಸಿಎಂಆರ್‌ ಮಂಡಿ ಬಂದ್‌ ಮಾಡದೆ ವಹಿವಾಟು ನಡೆಸಿರುವ ಸಂಗತಿ ತಿಳಿದು ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಸಂಜೆ ಖುದ್ದು ಎಪಿಎಂಸಿಗೆ ಬಂದು ಮಂಡಿ ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡುವಂತೆ ಆದೇಶಿಸಿದರು. ಬಳಿಕ ಎಚ್ಚೆತ್ತ ಅಧಿಕಾರಿಗಳು ಮಂಡಿ ಬಂದ್‌ ಮಾಡಿಸಿದರು.

ಮಂಡಿ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ಇರುವ ಬಗ್ಗೆ ಆರೋಗ್ಯ ಇಲಾಖೆ ಬುಧವಾರವೇ ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ, ತಾಲ್ಲೂಕು ಆಡಳಿತವು ರಾಜಕೀಯ ಒತ್ತಡಕ್ಕೆ ಮಣಿದು ಮಂಡಿ ಬಂದ್‌ ಮಾಡಿಸದೆ ಕೈಚೆಲ್ಲಿತ್ತು.

ಚರ್ಚೆಗೆ ಗ್ರಾಸ: ಮಂಡಿ ಮಾಲೀಕರು ಸೋಂಕಿತ ವ್ಯವಸ್ಥಾಪಕರ ಸಂಪರ್ಕಕ್ಕೆ ಬಂದಿರುವ ಸಂಗತಿ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಅವರನ್ನು ಕ್ವಾರಂಟೈನ್‌ ಮಾಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಂಡಿಯ ಇಬ್ಬರು ಮಾಲೀಕರ ಪೈಕಿ ಒಬ್ಬರಿಗೆ ಗುರುವಾರ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಮಾಲೀಕರನ್ನು ಗುರುವಾರ ಸಂಜೆಯಿಂದ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು