ಸೋಮವಾರ, ಜನವರಿ 24, 2022
28 °C
ಉಪ ವಿಭಾಗಾಧಿಕಾರಿಗೆ ರೈತ ಸಂಘ ಸದಸ್ಯರ ಮನವಿ

ಪಿ ನಂಬರ್‌ ದುರಸ್ತಿ: ವಿಶೇಷ ತಂಡ ರಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮಂಜೂರಾಗಿರುವ ಸರ್ಕಾರಿ ಜಮೀನು ದುರಸ್ತಿ (ಪಿ ನಂಬರ್) ಮುಕ್ತಿಗೊಳಿಸಲು ವಿಶೇಷ ತಂಡ ರಚಿಸಿ ರೈತರ ಶೋಷಣೆ ತಪ್ಪಿಸಬೇಕೆಂದು ರೈತ ಸಂಘದ ಸದಸ್ಯರು ಇಲ್ಲಿ ಶನಿವಾರ ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ ಅವರಿಗೆ ಮನವಿ ಸಲ್ಲಿಸಿದರು.

‘ಪಿ ನಂಬರ್ ದುರಸ್ತಿಯನ್ನು ಅಧಿಕಾರಿಗಳು ಹಣ ಮಾಡುವ ದಂದೆಯಾಗಿಸಿಕೊಂಡಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ದಲ್ಲಾಳಿಗಳು ಪಿ ನಂಬರ್ ದುರಸ್ತಿ ಮಾಡುವ ಕಡತಗಳೊಂದಿಗೆ ಅಧಿಕಾರಿಗಳ ಕಚೇರಿಯಲ್ಲಿ ದರ್ಬಾರು ನಡೆಸುತ್ತಿದ್ದಾರೆ’ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ಪ್ರತಿ ಎಕರೆಗೆ ₹ 3 ಲಕ್ಷ ಲಂಚ ಕೊಟ್ಟರೆ 60 ದಿನದಲ್ಲಿ ಪಿ -ನಂಬರ್ ದುರಸ್ತಿಯಾಗುತ್ತದೆ. ಲಂಚ ಕೊಡದ ಬಡ ರೈತರ ಕಡತಗಳನ್ನು ಅಧಿಕಾರಿಗಳು ಶೀಘ್ರವಾಗಿ ವಿಲೇವಾರಿ ಮಾಡದೆ ಸತಾಯಿಸುತ್ತಿದ್ದಾರೆ. ನೊಂದ ರೈತರು ವರ್ಷಗಟ್ಟಲೇ ಕಚೇರಿಗೆ ಅಲೆದರೂ ನ್ಯಾಯ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಂದಾಯ ಮತ್ತು ಸರ್ವೆ ಇಲಾಖೆ ದಲ್ಲಾಳಿಗಳ ಇಲಾಖೆಯಾಗಿ ಮಾರ್ಪಟ್ಟಿವೆ. ಸರ್ಕಾರಿ ಅಧಿಕಾರಿಗಳು ಶ್ರೀಮಂತರ ಗುಲಾಮರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರ ರಕ್ತ ಹೀರುವ ದಲ್ಲಾಳಿಗಳ ಆರ್ಭಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ಜಮೀನುಗಳು ಭೂಗಳ್ಳರ ಪಾಲಾಗುತ್ತಿವೆ’ ಎಂದು ದೂರಿದರು.

ಸಮಸ್ಯೆಯ ಅರಿವಿಲ್ಲ: ‘ಪಿ ನಂಬರ್ ದುರಸ್ತಿ ಮಾಡಿರುವುದಾಗಿ ಸಭೆಗಳಲ್ಲಿ ಹೇಳಿಕೆ ನೀಡುವ ಅಧಿಕಾರಿಗಳಿಗೆ ಬಡ ರೈತರ ಸಮಸ್ಯೆಯ ಅರಿವಿಲ್ಲ. ಸಾವಿರಾರು ರೈತರು ಪೂರ್ವಿಕರ ಕಾಲದಿಂದಲೂ ಸಾಗುವಳಿ ಮಾಡುತ್ತಿರುವ ಜಮೀನಿಗೆ ಅಧಿಕಾರಿಗಳು ಸಾಗುವಳಿ ಚೀಟಿ ನೀಡದೆ ಸತಾಯಿಸುತ್ತಿದ್ದಾರೆ. ಕಂದಾಯ ದಾಖಲೆಪತ್ರಗಳಲ್ಲಿ ರೈತರ ಹೆಸರಿದ್ದರೂ ಅಧಿಕಾರಿಗಳು ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ಕಾರಣ ನೀಡಿ ಜಮೀನು ಮಂಜೂರಾತಿ ಆದೇಶ ರದ್ದುಪಡಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಸಂಘದ ಸದಸ್ಯರು ಕಿಡಿಕಾರಿದರು.

‘ಪಿ -ನಂಬರ್ ದುರಸ್ತಿ ನೆಪದಲ್ಲಿ ರೈತರ ಮೇಲೆ ನಡೆಯುತ್ತಿರುವ ಶೋಷಣೆ ತಡೆಯಬೇಕು. ಈ ನಿಟ್ಟಿನಲ್ಲಿ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡ ರಚಿಸಬೇಕು. ಅನ್ಯಾಯಕ್ಕೆ ಒಳಗಾದ ರೈತರಿಗೆ ನ್ಯಾಯ ಒದಗಿಸಬೇಕು. ಗ್ರಾಮ ಮಟ್ಟದಲ್ಲಿ ವಿಶೇಷ ಕಂದಾಯ ಅದಾಲತ್ ನಡೆಸಬೇಕು. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಹಾಗೂ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಕೋರಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಕಾರ್ಯಾಧ್ಯಕ್ಷ ಹನುಮಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಸಂಘಟನಾ ಸಂಚಾಲಕ ರಾಜು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.