ಗುರುವಾರ , ಸೆಪ್ಟೆಂಬರ್ 23, 2021
28 °C
ಸಭೆಯಲ್ಲಿ ನಬಾರ್ಡ್ ಎಜಿಎಂ ರಾಜಪ್ರಿಯಾ ಮುರುಗನ್‌ ಕಿವಿಮಾತು

ಪ್ಯಾಕ್ಸ್‌: ಆರ್ಥಿಕವಾಗಿ ಸದೃಢಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪ್ಯಾಕ್ಸ್‌) ಇ-ಶಕ್ತಿ ಅನುಷ್ಠಾನ ಮತ್ತು ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು’ ಎಂದು ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕಿ ರಾಜಪ್ರಿಯಾ ಮುರುಗನ್‌ ಕಿವಿಮಾತು ಹೇಳಿದರು.

ಇ-ಶಕ್ತಿ ಅನುಷ್ಠಾನ ಹಾಗೂ ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆ ಕುರಿತು ಇಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಪ್ಯಾಕ್ಸ್‌ಗಳು ರೈತರಿಗೆ ಹಾಗೂ ಮಹಿಳೆಯರಿಗೆ ನೆರವಾಗಬೇಕು’ ಎಂದು ಸೂಚಿಸಿದರು.

‘ರೈತರಿಗೆ, ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ, ಬಡ ಮಹಿಳೆಯರಿಗೆ ಹಾಗೂ ಸಂಸ್ಕರಣಾ ಘಟಕ, ವಾಣಿಜ್ಯ ಸಂಕೀರ್ಣ, ಗೋದಾಮು ನಿರ್ಮಾಣ, ಕೃಷಿ ಸಂಬಂಧಿ ಯಂತ್ರೋಪಕರಣ ಬಾಡಿಗೆಗೆ ಒದಗಿಸುವ ಸೇವಾಕೇಂದ್ರ ಸ್ಥಾಪನೆ ಸೇರಿದಂತೆ ಇತರೆ ಆರ್ಥಿಕ ಚಟುವಟಿಕೆ ಆರಂಭಿಸಲು ಪ್ಯಾಕ್ಸ್‌ಗಳಿಗೆ ಅವಕಾಶ ಸಿಕ್ಕಿದೆ’ ಎಂದರು.

‘ಸ್ವಂತ ಭೂಮಿ ಹೊಂದಿರುವ ಪ್ಯಾಕ್ಸ್‌ಗಳಿಗೆ ಸೇವಾ ಕೇಂದ್ರ ಸ್ಥಾಪಿಸಲು ಪ್ರಥಮ ಆದ್ಯತೆ ನೀಡಲಾಗಿದೆ. ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ಸೇವಾ ಕೇಂದ್ರಗಳ ಮೂಲಕ ರೈತರಿಗೆ ಸೌಲಭ್ಯ ಕಲ್ಪಿಸಬಹುದು. ಪಡಿತರ, ಸಾಲ ವಿತರಣೆಗೆ ಮಾತ್ರ ಸೀಮಿತವಾಗಿರುವ ಪ್ಯಾಕ್ಸ್‌ಗಳ ಆರ್ಥಿಕಾಭಿವೃದ್ದಿಗೂ ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ಗಣಕೀಕರಣಗೊಳಿಸಿದರೆ ವಹಿವಾಟು ಪಾರದರ್ಶಕವಾಗಿ ನಡೆಯುತ್ತದೆ. ಜತೆಗೆ ಆರ್ಥಿಕ ವಂಚನೆ ಕೊನೆಗೊಳ್ಳಲಿದ್ದು, ಮೊಬೈಲ್ ಮೂಲಕವೇ ಸಾಲ ಮರುಪಾವತಿ ಮತ್ತಿತರ ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿದರು.

ಆ.15ರ ಗಡುವು: ‘ಪ್ಯಾಕ್ಸ್‌ಗಳನ್ನು ವಿವಿಧೋದ್ದೇಶ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು ನಬಾರ್ಡ್ ಶಕ್ತಿ ತುಂಬಿದೆ. ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳ ಕಾರ್ಯದರ್ಶಿಗಳು ರೈತರಿಗೆ ಅಗತ್ಯ ಸೌಲಭ್ಯ ಒದಗಿಸುವ ವಿವಿಧೋದ್ದೇಶ ಸೇವಾ ಕೇಂದ್ರಗಳನ್ನು ಆ.15ರೊಳಗೆ ಆರಂಭಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಾಕೀತು ಮಾಡಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 200 ಪ್ಯಾಕ್ಸ್‌ಗಳಿವೆ. ಅಪೆಕ್ಸ್ ಬ್ಯಾಂಕ್‌ ಮತ್ತು ನಬಾರ್ಡ್ ಕೇಂದ್ರಗಳನ್ನು ತೆರೆಯಲು ಶೇ 4ರ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತವೆ. ಪ್ಯಾಕ್ಸ್‌ಗಳು ಕ್ರಿಯಾಯೋಜನೆ ರೂಪಿಸಿ ಡಿಸಿಸಿ ಬ್ಯಾಂಕ್‌ನಿಂದ ಅನುಮೋದನೆ ಪಡೆದುಕೊಂಡರೆ ಆರ್ಥಿಕ ನೆರವು ಸಿಗುತ್ತದೆ. ಸಕಾಲಕ್ಕೆ ಸಾಲದ ಕಂತು ಪಾವತಿಸಿದರೆ ಕೇಂದ್ರ ಸರ್ಕಾರದಿಂದ ಶೇ 3ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ’ ಎಂದು ವಿವರಿಸಿದರು.

ಜಿಎಸ್‌ಟಿ ಹೊರೆ: ‘ಕೇಂದ್ರಗಳ ಸ್ಥಾಪನೆಗೆ ಹಿಂದೆ ಜಿಎಸ್‌ಟಿ ಹೊರತುಪಡಿಸಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು. ಕಾಮಗಾರಿ ಆರಂಭಿಸಬೇಕಾದರೆ ಜಿಎಸ್‌ಟಿ ಹೊರೆಯಾಗುತ್ತದೆ. ಇದನ್ನು ಸಡಿಲಿಸಲು ಅವಕಾಶ ಇದೆಯೇ ಅಥವಾ ಹೊಸದಾಗಿ ಡಿಪಿಆರ್ ಸಿದ್ಧಪಡಿಸಿ ಕಳುಹಿಸಬಹುದಾ?’ ಎಂದು ಗೌರಿಬಿದನೂರು ತಾಲ್ಲೂಕಿನ ಬಾದಿಮಳ್ಳೂರು ಸೊಸೈಟಿ ಕಾರ್ಯದರ್ಶಿ ಡಿ.ಜೆ.ವಿಜಯ್‌ಕುಮಾರ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜಪ್ರಿಯ ಮುರುಗನ್, ‘ಸೊಸೈಟಿ ಕಾರ್ಯದರ್ಶಿಗಳು ಪೋರ್ಟಲ್‌ನಲ್ಲಿ ಒಂದು ಬಾರಿ ಡಿಪಿಆರ್‌ ದಾಖಲು ಮಾಡಿದ ಮೇಲೆ ಹೊಸದಾಗಿ ಮತ್ತೆ ದಾಖಲು ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಂತರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಖಲೀಂ ಉಲ್ಲಾ, ಬಾಲಾಜಿ, ಅವಿಭಜಿತ ಕೋಲಾರ ಜಿಲ್ಲೆಯ ಪ್ಯಾಕ್ಸ್‌ಗಳ ಸಿಇಒಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು