ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾನ್ ಇಂಡಿಯಾ ಜನಜಾಗೃತಿ ಕಾರ್ಯಕ್ರಮ

Last Updated 28 ಸೆಪ್ಟೆಂಬರ್ 2021, 15:56 IST
ಅಕ್ಷರ ಗಾತ್ರ

ಕೋಲಾರ: ‘ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.2ರಿಂದ ನ.14ರವರೆಗೆ ಪ್ಯಾನ್ ಇಂಡಿಯಾ ಅರಿವು ನೆರವು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಆರ್.ನಾಗರಾಜ್‌ ತಿಳಿಸಿದರು.

ಪ್ಯಾನ್ ಇಂಡಿಯಾ ಕಾರ್ಯಕ್ರಮ ಸಂಬಂಧ ಇಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಪ್ರಾಧಿಕಾರದ ಸವಲತ್ತು ಪಡೆಯುವ ಬಗ್ಗೆ ಮತ್ತು ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.

‘ಅ.2ರಂದು ಗಾಂಧಿ ಜಯಂತಿ ಆಚರಣೆ ಜತೆಗೆ ಲೋಕ ಅದಾಲತ್‌ನ ಉಪಯೋಗದ ಬಗ್ಗೆ, ಅ.3ರಂದು ಹಿರಿಯ ನಾಗರಿಕರು ಮತ್ತು ಅಂಗವಿಕಲರ ಹಕ್ಕುಗಳ ಬಗ್ಗೆ, ಅ.4ರಂದು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಾನವ ಸಾಗಾಣಿಕೆ ತಡೆ ಕಾಯ್ದೆ ಬಗ್ಗೆ, ಅ.5ರಂದು ಕೋವಿಡ್–-19 ಬಗ್ಗೆ ಅರಿವು ಮತ್ತು ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಅ.6ರಂದು ಮೋಟಾರು ವಾಹನ ಕಾಯ್ದೆ ಮತ್ತು ಗ್ರಾಹಕರ ಕಾಯ್ದೆ, ಅ.7ರಂದು ಮಹಿಳೆಯರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ. ಅ.8ರಂದು ಕಾರ್ಮಿಕ ಕಾಯ್ದೆ ಬಗ್ಗೆ, ಅ.9ರಂದು ತೃತೀಯ ಲಿಂಗಿಗಳ ಹಕ್ಕುಗಳ ಸಂರಕ್ಷಣೆ ಕಾಯ್ದೆ ಬಗ್ಗೆ ಕಾರ್ಯಕ್ರಮ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಸ್ವಚ್ಛತಾ ಅಭಿಯಾನ: ‘ಕಾನೂನು ಸೇವಾ ದಿನಾಚರಣೆ ಅಂಗವಾಗಿ ನ.10ರಿಂದ ನ.13ರವರೆಗೆ ವಿವಿಧ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಹಲವೆಡೆ ಸ್ವಚ್ಛತಾ ಅಭಿಯಾನ, ಘನತ್ಯಾಜ್ಯ ವಿಲೆವಾರಿ. ಒಣ ಮತ್ತು ಹಸಿ ಕಸ ವಿಂಗಡಣೆ ಮತ್ತು ವಿಲೇವಾರಿ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಜನ ಮತ್ತು ಜಾನುವಾರು ಆರೋಗ್ಯ ರಕ್ಷಣೆ ಕುರಿತಂತೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಸಮಾರೋಪ ಸಮಾರಂಭ ಏರ್ಪಡಿಸಲಾಗುವುದು’ ಎಂದು ವಿವರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT