ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ಬಿಡುಗಡೆಗೆ ಒತ್ತಾಯ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಧರಣಿ
Last Updated 26 ಮೇ 2019, 10:00 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಜಿ.ಹರೀಶ್‍ನನ್ನು ಎಸಿಬಿ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶನಿವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಸಂಪರಾಜ್ ಮಾತನಾಡಿ, ‘ಎಸಿಬಿ ಪೊಲೀಸರು ಸತ್ಯಾಂಶ ಅರಿಯದೆ ಹರೀಶ್‍ನನ್ನು ಬಂಧಿಸಿದ್ದಾರೆ. ಸೂಲೂರು ಪಂಚಾಯಿತಿಗೆ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಉದ್ದೇಶಪೂರ್ವಕವಾಗಿಯೇ ಸಿಕ್ಕಾಕಿಸಿದ್ದಾರೆ' ಎಂದು ದೂರಿದರು.

`ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಕಲಾವತಿ ದೂರವಾಣಿ ಕರೆ ಮಾಡಿ ನಿವೇಶನ ಅಳತೆ ಮಾಡಿಕೊಡಲು ಸಂಬಂಧಿಕರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆ ಕೆಲಸ ಬೇಗ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಅರ್ಜಿ ವಿಲೇವಾರಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಣ ನೀಡುವುದಾಗಿ ಆಮಿಷ ಹೊಡ್ಡಿದ್ದರೂ ನಿರಾಕರಿಸಿದ್ದಾರೆ. ಇದನ್ನು ಗಮನಿಸದೆ ಬಂಧಿಸಿರುವುದು ಎಷ್ಟು ಮಾತ್ರ ಸರಿ' ಎಂದು ಪ್ರಶ್ನಿಸಿದರು.

`ಕಲಾವತಿ ದೂರವಾಣಿ ಕರೆಯನ್ನು ತಿರುಚಿ ಎಸಿಬಿ ಪೊಲೀಸರಿಗೆ ನೀಡಿದ್ದಾರೆ. ಎಸಿಬಿ ಅಧಿಕಾರಿಗಳಿಂದ ಗ್ರಾ.ಪಂ ಪಿಡಿಒ ಹಾಗೂ ಕಾರ್ಯದರ್ಶಿಗಳನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವ ಪ್ರವೃತಿ ಮುಂದುವರಿಸಿಕೊಂಡಿದ್ದಾರೆ' ಎಂದು ಆರೋಪಿಸಿದರು.

‘ಹರೀಶ್ ಕಚೇರಿಯಿಂದ ಮಧ್ಯಾಹ್ನದ ಊಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಅರ್ಜಿದಾರ ಗುರುಡನಹಳ್ಳಿ ನಾರಾಯಣಸ್ವಾಮಿ ಜತೆ ಬಂದ ಕಲಾವತಿ ಹಣ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ, ಇದಕ್ಕೆ ಒಪ್ಪದ ಹರೀಶ್ ಕಾರು ಹತ್ತಿದ. ಹಣ ಸ್ವೀಕರಿಸದ ಹಿನ್ನಲೆಯಲ್ಲಿ ಕಾರಿನೊಳಗೆ ಹಾಕಿ ಪರಾರಿಯಾಗಲು ಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಸಿಬಿ ಪೊಲೀಸರು ಅಡಿಯೋ ಕೇಳಿಸಿಕೊಂಡು ಬಂಧಿಸುತ್ತಾರೆ’ ಎಂದು ಅತಂಕ ವ್ಯಕ್ತಪಡಿಸಿದರು.

‘ಕಲಾವತಿ ಬಲವಂತವಾಗಿ ಹಣ ನೀಡುತ್ತಿರುವ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿದ್ದು, ಎಸಿಬಿ ಪೊಲೀಸರು ಪರಿಶೀಲಿಸಿ ಹರೀಶ್‍ನನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿ.ಪಂ ಎದುರು ತೀವ್ರ ಹೋರಾಟ ನಡೆಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಸದಸ್ಯ ಮಹೇಶ್‍ಕುಮಾರ್ ಮಾತನಾಡಿ, ‘ಹರೀಶ್ ಬಂಧನದ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯೆ ಪತ್ನಿ ಜಯರಾಮಪ್ಪ ಕೈವಾಡವಿದೆ. ಸಕಾಲಕ್ಕೆ ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸುತ್ತಿದ್ದ ಪಿಡಿಒನ್ನು ಉದ್ದೇಶ ಪೂರ್ವಕವಾಗಿಯೇ ಸಿಕ್ಕಿ ಹಾಕಿಸಿದ್ದಾರೆ’ ಎಂದರು.

‘ಪ್ರಮಾಣಿಕ ಅಧಿಕಾರಿಗಳಿಗೆ ಧೈರ್ಯ ತುಂಬಬೇಕಾದ ಎಸಿಬಿ ಪೊಲೀಸರು ಯಾವುದೇ ಸತ್ಯಾಂಶ ಅರಿಯದೆ ಬಂಧಿಸಿದರೆ ಅಧಿಕಾರಿಯ ಕುಟುಂಬ ಮೇಲೆ ಪರಿಣಾಮ ಬೀರುವುದರ ಜತೆಗೆ, ಇರತೆ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕಡಿಮೆ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ದೂರು ಬಂದಾಗ ದೂರುದಾರರ ಹಿನ್ನಲೆಯನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ’ ಎಂದು ಸಲಹೆ ನೀಡಿದರು.

‘ಯಾವುದೇ ಪಂಚಾಯಿತಿಗಳಲ್ಲಿ ಭ್ರಷ್ಟ ಅಧಿಕಾರಿಗಳು, ಸಿಬ್ಬಂದಿ ಇದ್ದರೆ ಅವರನ್ನು ಸಂಘದಿಂದ ಸರಿಪಡಿಸಿಕೊಳ್ಳಲಾಗುತ್ತಿದೆ. ಪಂಚಾಯಿತಿ ಅಧಿಕಾರಿಗಳು ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ರೀತಿ ಕಿರುಕುಳ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಎದುರು ಧರಣಿ ನಡೆಸಿದ ಸಂಘದ ಸದಸ್ಯರು, ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಅವರಿಗೂ ಮನವಿ ಸಲ್ಲಿಸಿದರು.

ಸಂಘದ ಪದಾಧಿಕಾರಿಗಳಾದ ಎಂ.ರಾಮಕೃಷ್ಣ, ಖಜಾಂಚಿ ಲಕ್ಷ್ಮಿ, ಚಂಗಲರಾಯಗೌಡ, ಕೆ.ಎಂ.ವೇಣು, ಎಚ್.ನಾಗರಾಜ್, ಸರಸ್ವತಿ, ಡಾ.ವಾಣಿ, ರಮೇಶ್, ಬೈರೆಡ್ಡಿ, ಭಾಸ್ಕರ್, ಬಾಲಾಜಿ, ಮೇಘಾ, ಸೋಮಶೇಖರ್, ಯಶವಂತ್, ಕಲಾವತಿ, ಸುನೀತಾ, ಕಮತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT