ಗುರುವಾರ , ಸೆಪ್ಟೆಂಬರ್ 16, 2021
24 °C
ಖಾಸಗಿ ಶಾಲಾ ವ್ಯಾಮೋಹ ಹೋಗಲಾಡಿಸಲು ಶಿಕ್ಷಕರ ಪ್ರಯತ್ನ

ಮಕ್ಕಳ ದಾಖಲಾತಿಗೆ ಪೋಷಕರ ಮನವೊಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರಲ್ಲಿ ಅರಿವು ಮೂಡಿಸಿದರು.

ಶಾಲೆಯ ಮುಖ್ಯಶಿಕ್ಷಕ ಸಿ.ಎಸ್‌.ಪ್ರದೀಪ್‌ ನೇತೃತ್ವದಲ್ಲಿ ಗ್ರಾಮಗಳಿಗೆ ತೆರಳಿದ ಶಿಕ್ಷಕರು, ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

‘ದಾನಿಗಳು ಮತ್ತು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಸಿಗುವ ನೆರವಿನಿಂದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತಲೂ ಹೆಚ್ಚು ಪ್ರಗತಿ ಸಾಧಿಸಿವೆ. ಜತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ’ ಎಂದು ಶಿಕ್ಷಕರು ಪೋಷಕರಿಗೆ ತಿಳಿ ಹೇಳಿದರು.

ತಾಲ್ಲೂಕಿನ ಬೆತ್ತನಿ, ಮಡೇರಹಳ್ಳಿ, ಚೆಲುವನಹಳ್ಳಿ, ಚುಂಚುದೇನಹಳ್ಳಿ, ನಾಗಲಾಪುರ ಗ್ರಾಮಕ್ಕೆ ಭೇಟಿ ನೀಡಿದ ಶಿಕ್ಷಕರ ತಂಡವು ದಾಖಲಾತಿ ಅಭಿಯಾನದ ಮೂಲಕ ಪೋಷಕರಲ್ಲಿನ ಖಾಸಗಿ ಶಾಲಾ ವ್ಯಾಮೋಹ ಹೋಗಲಾಡಿಸಿ ಮನವೊಲಿಸುವ ಪ್ರಯತ್ನ ಮಾಡಿತು.

‘ಸರ್ಕಾರಿ ಶಾಲೆಯೆಂಬ ಕೀಳರಿಮೆ ಬೇಡ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದೇವೆ. ಸರ್ಕಾರ ನೀಡುವ ಉಚಿತ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ,ಪಠ್ಯಪುಸ್ತಕ, ಶೂ ಜತೆಗೆ ದಾನಿಗಳ ನೆರವನ್ನು ಶಾಲೆಗೆ ಹರಿಸುವಲ್ಲಿ ಸಫಲರಾಗಿದ್ದೇವೆ. ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಮುನ್ನ ಸರ್ಕಾರಿ ಶಾಲೆಗೆ ಒಂದು ಬಾರಿ ಬಂದು ಸೌಲಭ್ಯಗಳನ್ನು ಗಮನಿಸಿ’ ಎಂದು ಶಿಕ್ಷಕರು ಪೋಷಕರಿಗೆ ಆಹ್ವಾನ ನೀಡಿದರು.

ಸಂಕಷ್ಟಕ್ಕೆ ಸಿಲುಕಬೇಡಿ: ‘ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಸುಸಜ್ಜಿತ ಮತ್ತು ಖಾಸಗಿ ಶಾಲೆಗಳಲ್ಲಿ ಇರದ ವಿಜ್ಞಾನ ಪ್ರಯೋಗಾಲಯ ಸೌಲಭ್ಯ, ಜಿಲ್ಲೆಯಲ್ಲೇ ಮೊದಲ ಬಾರಿಗೆ ಸಮಾಜ ವಿಜ್ಞಾನ ಪ್ರಯೋಗಾಲಯ ಸೌಲಭ್ಯ ಹೀಗೆ ಎಲ್ಲವನ್ನೂ ಒದಗಿಸಿದ್ದೇವೆ. ಖಾಸಗಿ ಶಾಲೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲದಿದ್ದರೂ, ಆಡಳಿತ ಮಂಡಳಿ ಕೇಳುವಷ್ಟು ವಂತಿಗೆ ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಡಿ’ ಎಂದು ಸಲಹೆ ನೀಡಿದರು.

‘ದೇಶದ ಮಹಾನ್ ನಾಯಕರು, ವಿಜ್ಞಾನಿಗಳು, ಸಾಧಕರು ಸರ್ಕಾರಿ ಶಾಲೆಯಲ್ಲಿ ಓದಿದವರು ಎಂಬುದನ್ನು ಮರೆಯಬೇಡಿ. ನಮ್ಮ ಶಾಲೆಯಲ್ಲೂ ಆಂಗ್ಲ ಮಾಧ್ಯಮದ ಶಿಕ್ಷಣವಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆಂಗ್ಲ ಮಾಧ್ಯಮದಲ್ಲಿ ಶಾಲೆಗೆ ಶೇ 100ರಷ್ಟು ಗುಣಾತ್ಮಕ ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಸಮಾನ ಶಿಕ್ಷಣ ಉಳಿಯಲು ಸಹಕರಿಸಿ’ ಎಂದು ಮನವಿ ಮಾಡಿದರು.

ಶಾಲೆಯ ಸೌಲಭ್ಯಗಳ ಮಾಹಿತಿಯ ವಿವರ ಒಳಗೊಂಡ ಕರೆಪತ್ರಗಳನ್ನು ಪೋಷಕರಿಗೆ ಹಂಚಲಾಯಿತು. ಶಾಲೆಯ ಶಿಕ್ಷಕರಾದ ಭವಾನಿ, ಸುಗುಣಾ, ಲೀಲಾ, ಸಿ.ಎಲ್.ಶ್ರೀನಿವಾಸಲು, ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.