ಅನಧಿಕೃತ ಜಾಗದಲ್ಲಿ ಪಾರ್ಕಿಂಗ್‌, ತಳ್ಳುಗಾಡಿಗಳ ವಿರುದ್ಧ ಕಾರ್ಯಾಚರಣೆ

7

ಅನಧಿಕೃತ ಜಾಗದಲ್ಲಿ ಪಾರ್ಕಿಂಗ್‌, ತಳ್ಳುಗಾಡಿಗಳ ವಿರುದ್ಧ ಕಾರ್ಯಾಚರಣೆ

Published:
Updated:
Deccan Herald

ಚಾಮರಾಜನಗರ: ಪಟ್ಟಣದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಪಾದಚಾರಿ ಮಾರ್ಗಗಳಲ್ಲಿ ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುವವರು ಹಾಗೂ ಸಾಮಗ್ರಿಗಳನ್ನು ಇಟ್ಟು ಸಂಚಾರಕ್ಕೆ ತೊಡಕುಂಟು ಮಾಡುತ್ತಿರುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಎರಡು ಮೂರು ದಿನಗಳಿಂದ ನಡೆಸುತ್ತಿದ್ದಾರೆ.

ಹೊಸದಾಗಿ ಕಾಂಕ್ರೀಟ್‌ ಹಾಕಲಾಗಿರುವ ಬಿ. ರಾಚಯ್ಯ ಜೋಡಿ ರಸ್ತೆ, ಡಿವೀಯೇಷನ್‌ ರಸ್ತೆ, ಚಾಮರಾಜೇಶ್ವರ ದೇವಾಲಯದ ಸುತ್ತಲಿನ ರಸ್ತೆಗಳು ಹಾಗೂ ಅಂಗಡಿ ಬೀದಿ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೀತ ಪ್ರಸನ್ನ ಅವರ ನೇತೃತ್ವದಲ್ಲಿ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ ತಡೆಯುವ ಮತ್ತು ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ.‌

ಎಲ್ಲ ಕಡೆಗಳಲ್ಲೂ ಪಾದಚಾರಿ ಮಾರ್ಗವನ್ನು ಬಿಟ್ಟು ವ್ಯಾಪಾರ ಮಾಡಬೇಕು ಎಂದು ಪೊಲೀಸರು ವ್ಯಾಪಾರಸ್ಥರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಂಗಡಿಗಳ ಮಾಲೀಕರು ಹೊರಗಡೆ ಸಾಮಾನುಗಳನ್ನು ಇಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಎಲ್ಲೆಂದರಲ್ಲಿ ನಿಲ್ಲಿಸಿದ್ದ ದ್ವಿಚಕ್ರಗಳನ್ನು ಲಾರಿಯಲ್ಲಿ ಎತ್ತಿಕೊಂಡು ಹೋಗಲಾಗುತ್ತಿದೆ.  

ಸೋಮವಾರ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಗೀತ ಪ್ರಸನ್ನ ಅವರು ಸ್ಥಳಕ್ಕೆ ನಗರ ಸಭೆಯ ಆಯುಕ್ತ ಎಂ. ರಾಜಣ್ಣ ಅವರನ್ನು ಕರೆಸಿಕೊಂಡು, ಪಾದಚಾರಿ ಮಾರ್ಗಕ್ಕೆ ಗುರುತಿಸಿರುವ ಜಾಗದಲ್ಲಿ ಇನ್ನೂ ಕಟ್ಟಡ ಹಾಗೂ ಅವಶೇಷಗಳನ್ನು ತೆರವುಗೊಳಿಸದಿರುವ ಬಗ್ಗೆ ಗಮನ ಸೆಳೆದರು.

‘ಹೊಸ ರಸ್ತೆ ನಿರ್ಮಾಣ ಮಾಡಿದ ನಂತರ, ನಗರಸಭೆಯವರು ವಾಹನ ನಿಲುಗಡೆಗಳಿಗಾಗಿ ಜಾಗ ಗುರುತಿಸುತ್ತಾರೆ ಎಂದು ಇಷ್ಟು ದಿನ ಕಾದಿದ್ದೆವು. ಆದರೆ, ಅದಕ್ಕೆ ಪ್ರತ್ಯೇಕ ಕಾರ್ಯಾದೇಶ ನೀಡಬೇಕು ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿವರೆಗೆ ಕಾಯಲು ಸಾಧ್ಯವಿಲ್ಲ ಎಂದು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಗೀತ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನಗಳ ಸಂಚಾರ, ಜನರ ಓಡಾಟಕ್ಕೆ ತೊಂದರೆಯಾಗವಾರದು ಎಂಬ ಉದ್ದೇಶದಿಂದ ಪಟ್ಟಣದ ಎಲ್ಲ ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅವರು ಹೇಳಿದರು.

ಪೊಲೀಸ್‌ ಸಿಬ್ಬಂದಿಗೆ ಏಟು ಬಿದ್ದ ನಂತರ ಕ್ರಮ?

ಮೂರು ದಿನಗಳ ಹಿಂದೆ ದೊಡ್ಡ ಅಂಗಡಿ ಬೀದಿಯಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ವ್ಯಾಪಾರಿಯೊಬ್ಬ ಪಟ್ಟಣ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಕೈ ಮಾಡಿದ್ದ. ರಸ್ತೆಯಲ್ಲಿ ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುತ್ತಿರುವ ವಿಚಾರದಲ್ಲಿ ವ್ಯಾಪಾರಿಗಳು ಮತ್ತು ಪೊಲೀಸ್‌ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಈ ಘಟನೆ ನಡೆದಿತ್ತು.

ಅದರ ಮರುದಿನವೇ ಪೊಲೀಸರು ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ವ್ಯಾಪಾರ ಮಾಡದಂತೆ ಎಚ್ಚರಿಸಿದ್ದರು. ಆ ನಂತರ ವ್ಯಾಪಾರಿಗಳು ಪಾದಚಾರಿ ಮಾರ್ಗ ಬಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. 

‘ತಳ್ಳುಗಾಡಿಗಳನ್ನು ತೆರವುಗೊಳಿಸಬೇಕಾದರೆ ಪೊಲೀಸರಿಗೆ ಏಟು ಬೀಳಬೇಕಾಯಿತು’ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಹಿಂದೆ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಹಲವರು ದೂರು ನೀಡಿದ್ದರು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ.

ಆದರೆ, ಆ ಘಟನೆಗೂ ಈ ಕಾರ್ಯಾಚರಣೆಗೂ ಸಂಬಂಧ ಇಲ್ಲ ಎಂದು ‍ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !