ಗುರುವಾರ , ಆಗಸ್ಟ್ 22, 2019
21 °C
ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಆದೇಶ

ಕೊಳವೆ ಬಾವಿ ಮಾಲೀಕರ ಬಿಲ್ ಪಾವತಿಸಿ

Published:
Updated:
Prajavani

ಕೋಲಾರ: ‘ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ನೀರು ಕೊಡುತ್ತಿರುವ ಖಾಸಗಿ ಕೊಳವೆ ಬಾವಿ ಮಾಲೀಕರಿಗೆ ಕೂಡಲೇ ಬಿಲ್‌ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಧಿಕಾರಿಗಳಿಗೆ ಆದೇಶಿಸಿದರು.

ಇಲ್ಲಿ ಇತ್ತೀಚೆಗೆ ನಡೆದ ಬರ ನಿರ್ವಹಣೆ ಕಾಮಗಾರಿ ಕುರಿತ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಮಳೆಯಾಗದ ಕಾರಣ ನೀರಿನ ಸಮಸ್ಯೆ ಗಂಭೀರವಾಗಿದೆ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯ 163 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಈ ಪೈಕಿ 73 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಹಾಗೂ 90 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಟ್ಯಾಂಕರ್‌ ಮೂಲಕ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಆಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಖಾಸಗಿ ಕೊಳವೆ ಬಾವಿ ಗುರುತಿಸಿ ನೀರು ಪೂರೈಸಬೇಕು’ ಎಂದು ತಿಳಿಸಿದರು.

‘ನೀರಿನ ಕೊರತೆಯಿರುವ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ನೋಡಲ್ ಅಧಿಕಾರಿಗಳಿಗೆ ಸಲ್ಲಿಸಿ. ಅವರೂ ಪರಿಶೀಲನೆ ಮಾಡುತ್ತಾರೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಟ್ಯಾಂಕರ್ ನೀರು ಬಳಕೆಯಾಗುತ್ತಿದೆ. ಅಗತ್ಯವಿರುವ ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ನೀರು ಕೊಡಬೇಕು. ನೀರು ವ್ಯರ್ಥ ಮಾಡಬಾರದು’ ಎಂದರು.

ದುರಸ್ತಿ ಮಾಡಿಸಿ: ‘ಜನರಿಗೆ ಶುದ್ಧ ಕುಡಿಯುವ ನೀರು ಕೊಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಈ ಘಟಕಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಘಟಕಗಳು ಕೆಟ್ಟಿದ್ದರೆ ಶೀಘ್ರವೇ ದುರಸ್ತಿ ಮಾಡಿಸಬೇಕು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡುವವರ ಸಕಾಲಕ್ಕೆ ಸಿಗುತ್ತಿಲ್ಲ. ಹೀಗಾಗಿ ದುರಸ್ತಿ ಕಾರ್ಯ ತಡವಾಗುತ್ತಿದೆ’ ಎಂದು ತಿಳಿಸಿದರು. ಆಗ ಜಿಲ್ಲಾಧಿಕಾರಿ, ‘ಗ್ರಾಮಗಳಲ್ಲಿ ಐಟಿಐ, ಡಿಪ್ಲೊಮಾ, ಬಿ.ಇ ಮಾಡಿದ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇದ್ದಾರೆ. ಅವರಿಗೆ ತರಬೇತಿ ಕೊಡಿಸಿ ಘಟಕಗಳನ್ನು ದುರಸ್ತಿ ಮಾಡಿಸಿ. ಅವರಿಗೂ ಉದ್ಯೋಗ ಸಿಕ್ಕಿದಂತೆ ಆಗುತ್ತದೆ’ ಎಂದು ಸಲಹೆ ನೀಡಿದರು.

‘ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು ಮಳೆ ಕೊಯ್ಲು ಪದ್ಧತಿ ಅಳವಡಿಸಬೇಕು. ಕಚೇರಿ ಆವರಣದಲ್ಲಿ ಖಾಲಿ ಇರುವ ಜಾಗದಲ್ಲಿ ಸಸಿ ನೆಡಬೇಕು. ಜತೆಗೆ ಮರ ಗಿಡ ಬೆಳೆಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಕೇಂದ್ರದ ಜಲಶಕ್ಷಿ ಅಭಿಯಾನ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಜಿಪಿಎಸ್‌ ಕಡ್ಡಾಯ: ‘ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಉಪಕರಣ ಅಳವಡಿಸಿರಬೇಕು. ಜಿಪಿಎಸ್‌ ಇಲ್ಲದ ಟ್ಯಾಂಕರ್‌ಗಳಿಗೆ ಬಿಲ್‌ ಪಾವತಿಸುವುದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Post Comments (+)