ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲಕ್ಕೆ ಗ್ರಂಥಾಲಯ ಕರ ಪಾವತಿಸಿ

ಸಭೆಯಲ್ಲಿ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಡಿ.ಸಿ ಮಂಜುನಾಥ್ ಸೂಚನೆ
Last Updated 18 ಜುಲೈ 2019, 19:55 IST
ಅಕ್ಷರ ಗಾತ್ರ

ಕೋಲಾರ: ‘ಸ್ಥಳೀಯ ಸಂಸ್ಥೆಗಳು ಕಾಲಕಾಲಕ್ಕೆ ಗ್ರಂಥಾಲಯ ಕರ ಪಾವತಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ₹ 3.31 ಕೋಟಿ ಗ್ರಂಥಾಲಯ ಕರ ಬಾಕಿಯಿದೆ. ಇದನ್ನು ಶೀಘ್ರವೇ ಪಾವತಿಸಬೇಕು’ ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋಲಾರ ನಗರಸಭೆ ಲೆಕ್ಕಾಧಿಕಾರಿ ಗೀತಾ, ‘ಈಗಾಗಲೇ ಗ್ರಂಥಾಲಯ ಕರ ಪಾವತಿಸಿದ್ದು, ಬಾಕಿಯಿರುವ ₹ 7.49 ಲಕ್ಷವನ್ನು ವಾರದೊಳಗೆ ಪಾವತಿಸಲಾಗುವುದು’ ಎಂದು ಹೇಳಿದರು. ಇದೇ ರೀತಿ ಬಂಗಾರಪೇಟೆ, ಮುಳಬಾಗಿಲು ಅಧಿಕಾರಿಗಳು ಮಾತನಾಡಿ, ‘ಪ್ರತಿ ತಿಂಗಳು ₹ 2 ಲಕ್ಷದಂತೆ ಪಾವತಿಸಿ ಗ್ರಂಥಾಲಯ ಕರ ಬಾಕಿ ತೀರಿಸುತ್ತೇವೆ’ ಎಂದು ಭರವಸೆ ನೀಡಿದರು.

ಶ್ರೀನಿವಾಸಪುರ ಪುರಸಭೆಯು ಕಾಲಕಾಲಕ್ಕೆ ಗ್ರಂಥಾಲಯ ಕರ ಪಾವತಿಸಿರುವುದಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಅತ್ಯಾಧುನಿಕ ಹೊಸ ಕಟ್ಟಡ, ಡಿಜಿಟಲ್ ಗ್ರಂಥಾಲಯ, ಖಾಲಿ ಇರುವ ಗ್ರಂಥಾಲಯ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆಗೆ ಕೊಡುವ ಮೂಲಕ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ತರಬೇತಿ ಕೊಡಬೇಕು: ‘ಈ ಹಿಂದೆ ಡಿ.ಕೆ.ರವಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದ ರೀತಿಯಲ್ಲೇ ವಿವಿಧ ಇಲಾಖೆಗಳು ಮತ್ತು ಕೈಗಾರಿಕೆಗಳ ಸಮುದಾಯ ಅಭಿವೃದ್ಧಿ ನಿಧಿ ಬಳಸಿಕೊಂಡು ತರಬೇತಿ ಕೊಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮುಂದಿನ ಹಣಕಾಸು ವರ್ಷದ ಆಯವ್ಯಯಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ₹ 10.92 ಲಕ್ಷ ಆರಂಭಿಕ ಶಿಲ್ಕು, ₹ 1.32 ಕೋಟಿ ಆಯವ್ಯಯ ಸೇರಿದಂತೆ ₹ 1.43 ಕೋಟಿ ಆದಾಯ ಮತ್ತು ಪ್ರಸಕ್ತ ಸಾಲಿನಲ್ಲಿ ₹ 1.15 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಯಿತು. ಜತೆಗೆ ₹ 28.17 ಲಕ್ಷ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಯಿತು.

ಗೌರವಧನ ಹೆಚ್ಚಳ: ‘ಜಿಲ್ಲಾ ಗ್ರಂಥಾಲಯದಲ್ಲಿ ವೋಚರ್ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸ್ವಚ್ಛತಾ ಕೆಲಸಗಾರರು, ಕಂಪ್ಯೂಟರ್ ಆಪರೇಟರ್‌ಗಳ ಗೌರವಧನವನ್ನು ₹ 5 ಸಾವಿರದಿಂದ ₹ 6 ಸಾವಿರಕ್ಕೆ ಹೆಚ್ಚಿಸಬೇಕು. ಈ ಕೆಲಸಗಾರರು ಕನಿಷ್ಠ ವೇತನಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು’ ಎಂದು ಗ್ರಂಥಾಲಯಾಧಿಕಾರಿ ಹೇಳಿದರು. ಆಗ ಪ್ರಾಧಿಕಾರದ ಸದಸ್ಯರು ಗೌರವಧನ ಹೆಚ್ಚಳಕ್ಕೆ ಅನುಮೋದನೆ ನೀಡಿದರು.

ಹಿಂದಿನ ವರ್ಷದ ಆಯವ್ಯಯಕ್ಕೆ ಅನುಸಮರ್ಥನೆ, ಪ್ರಾಧಿಕಾರದ ಕೋಟಾದಲ್ಲಿ ಖರೀದಿಸಿರುವ ಪುಸ್ತಕಗಳಿಗೆ ಅನುಸಮರ್ಥನೆ, ಜಯನಗರ ಸಮುದಾಯ ಮಕ್ಕಳ ಗ್ರಂಥಾಲಯ ಕಟ್ಟಡ ನಿರ್ಮಾಣ, ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮ ಪಂಚಾಯಿತಿ ಗ್ರಂಥಾಲಯದ ಒಂದನೇ ಮಹಡಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ಕಟ್ಟಡ ನಿರ್ಮಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ದಿವಾಕರ್, ಗ್ರಂಥಾಲಯ ಸಮಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT