ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಒ ವರ್ಗಾವಣೆ: ಸಿಇಒ ವಿರುದ್ಧ ಪ್ರತಿಭಟನೆ

Last Updated 27 ಅಕ್ಟೋಬರ್ 2021, 16:26 IST
ಅಕ್ಷರ ಗಾತ್ರ

ಕೋಲಾರ: ಪಿಡಿಒರನ್ನು ದಿಢೀರ್‌ ವರ್ಗಾವಣೆ ಮಾಡಿದ ಬಳಿಕ ಸಾಮಾನ್ಯ ಸಭೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಲ್ಲವೆಂದು ಆರೋಪಿಸಿ ತಾಲ್ಲೂಕಿನ ಅಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿಯಲ್ಲಿ ಸಿಇಒ ವಿರುದ್ಧ ಪ್ರತಿಭಟನೆ ನಡೆಸಿದರು.

‘ಅ.18ರಂದು ಪಿಡಿಒ ಜತೆ ಚರ್ಚಿಸಿ ಅ.27ರಂದು ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಿ ಎಲ್ಲಾ ಸದಸ್ಯರಿಗೆ ಸಭೆಯ ನೋಟಿಸ್ ಕಳುಹಿಸಿದ್ದೆವು. ಆದರೆ, ಅ.21ರಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯ ಏಕಾಏಕಿ ಪಿಡಿಒರನ್ನು ವರ್ಗಾವಣೆ ಮಾಡಿದ್ದಾರೆ’ ಎಂದು ಅಣ್ಣಿಹಳ್ಳಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್‌ಗೌಡ ಆರೋಪಿಸಿದರು.

‘ಗ್ರಾ.ಪಂನಲ್ಲಿ ಕಳೆದ 3 ತಿಂಗಳಿಂದ ಕಾರ್ಯದರ್ಶಿ ಸಹ ಇಲ್ಲ. ಹೀಗಾಗಿ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಜಿ.ಪಂ ಸಿಇಒಗೆ ಮಾಹಿತಿ ನೀಡಲಾಗಿತ್ತು. ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಸಿಇಒ ಭರವಸೆ ನೀಡಿದ್ದರು. ಆದರೆ, ಸಭೆಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸಿಇಒ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ಕೊಡದಿದ್ದರೆ ಹೇಗೆ? ಸಮಸ್ಯೆ ಬಗೆಹರಿಸಿ. ಇಲ್ಲವೇ ನಾವು ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ. ನೀವೇ ಆಡಳಿತ ನಡೆಸಿಕೊಳ್ಳಿ’ ಎಂದು ಸಿಇಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಜಿ.ಪಂ ಸಿಇಒ ಉಕೇಶ್‌ಕುಮಾರ್‌ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು ಅವರನ್ನು ಕಚೇರಿಗೆ ಕರೆಸಿಕೊಂಡು ಚರ್ಚಿಸಿದರು. ಬಳಿಕ ಮಧ್ಯಾಹ್ನದ ವೇಳೆಗೆ ಪಿಡಿಒರನ್ನು ಕಳುಹಿಸಿ ಸಮಸ್ಯೆ ಬಗೆಹರಿಸಿದರು.

ಗ್ರಾ.ಪಂ ಉಪಾಧ್ಯಕ್ಷೆ ಮುನಿರತ್ನ, ಆರ್ಥಿಕ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಉಪಾಧ್ಯಕ್ಷ ಸಂಪತ್‌ಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಉಪಾಧ್ಯಕ್ಷ ಮನೋಹರ್‌ಗೌಡ, ಸದಸ್ಯರಾದ ಈಶ್ವರಮ್ಮ, ನಾಗಮಣಿ, ಗಾಯತ್ರಿ, ಸಂಧ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT