‘ಪೈರೋಕ್ಲಾಸ್ಟಿಕ್’ ವಿಶೇಷ ಭೂವೈಜ್ಞಾನಿಕ ಸಂರಚನೆ

7
ಜ್ವಾಲಾಮುಖಿಯಿಂದ ಸೃಷ್ಟಿಯಾದ ಕಲ್ಲು ಬಂಡೆ: ವಿಜ್ಞಾನಿಗಳ ಸ್ಪಷ್ಟನೆ

‘ಪೈರೋಕ್ಲಾಸ್ಟಿಕ್’ ವಿಶೇಷ ಭೂವೈಜ್ಞಾನಿಕ ಸಂರಚನೆ

Published:
Updated:

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿ ಪತ್ತೆಯಾಗಿರುವ ‘ಪೈರೋಕ್ಲಾಸ್ಟಿಕ್’ ಸಂರಚನೆಯ ಬಂಡೆಯು ಸುಮಾರು 200 ಕೋಟಿ ವರ್ಷಗಳ ಹಿಂದೆ ರೂಪಿತವಾದದ್ದು ಎಂಬ ಸಂಗತಿಯು ಭಾರತೀಯ ಭೂ ಸರ್ವೇಕ್ಷಣಾ ವಿಜ್ಞಾನಿಗಳ (ಜಿಎಸ್‌ಐ) ಸಂಶೋಧನೆಯಿಂದ ತಿಳಿದುಬಂದಿದೆ.

ಜ್ವಾಲಾಮುಖಿಯಿಂದ ಸೃಷ್ಟಿಯಾಗಿರುವ ಪೈರೋಕ್ಲಾಸ್ಟಿಕ್ ಬಂಡೆಯಲ್ಲಿ ಯಾವುದೇ ಖನಿಜ ನಿಕ್ಷೇಪವಿಲ್ಲ. ಇದು ವಿಶೇಷ ಭೂವೈಜ್ಞಾನಿಕ ಸಂರಚನೆಯೇ ಕಲ್ಲು ಬಂಡೆಯಷ್ಟೇ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಇದೇ ರೀತಿ ಜ್ವಾಲಾಮುಖಿಯಿಂದ ಸೃಷ್ಟಿಯಾದ ಬಂಡೆಗಳು ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮರಡಹಳ್ಳಿ ಮತ್ತು ಉಡುಪಿ ಜಿಲ್ಲೆ ಮಲ್ಪೆಯಲ್ಲಿನ ಸೇಂಟ್‌ ಮೇರಿಸ್‌ ದ್ವೀಪದಲ್ಲೂ ಇವೆ. ಇವು ವಿಶೇಷ ಭೂವೈಜ್ಞಾನಿಕ ಸಂರಚನೆಗಳು. ಭವಿಷ್ಯದ ಅಧ್ಯಯನ ಮತ್ತು ಉನ್ನತ ಸಂಶೋಧನೆಗಾಗಿ ಇವುಗಳನ್ನು ರಕ್ಷಿಸಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಎಸ್‌ಐ ಹಾಗೂ ಜಿಲ್ಲಾಧಿಕಾರಿಯವರ ಸೂಚನೆಯಂತೆ ಬಂಡೆಯ ಸರ್ವೆ ಮಾಡಲಾಗಿದೆ. ಬಂಡೆಯು ಸುಮಾರು 3 ಎಕರೆ 20 ಗುಂಟೆ ವಿಸ್ತರವಾಗಿದೆ. ಬಂಡೆ ಸುತ್ತಲೂ ಸದ್ಯದಲ್ಲೇ ತಂತಿ ಬೇಲಿ ಅಳವಡಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ಕೆಜಿಎಫ್‌ ವರದಿ: ತಾಲ್ಲೂಕಿನ ಪೆದ್ದಪಲ್ಲಿ ಗ್ರಾಮದ ಸರ್ವೆ ನಂಬರ್ 15 ಮತ್ತು 17ರ ಭೂ ಪ್ರದೇಶವನ್ನು ಅಧ್ಯಯನದ ಉದ್ದೇಶಕ್ಕಾಗಿ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಲಾಗಿದೆ ಎಂದು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ನಿವೃತ್ತ ಉಪ ವ್ಯವಸ್ಥಾಪಕ ವೆಂಕಟಸ್ವಾಮಿ ತಿಳಿಸಿದರು.

ಪೆದ್ದಪಲ್ಲಿ ಬಂಡೆಯಲ್ಲಿ ವಜ್ರ, ಪ್ಲಾಟಿನಂ ಮತ್ತು ಖನಿಜದ ನಿಕ್ಷೇಪವಿದೆ ಎಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ‘ಈ ಬಂಡೆಯು 200 ಕೋಟಿ ವರ್ಷದ ಹಿಂದೆ ಜ್ವಾಲಾಮುಖಿಯಿಂದ ರೂಪುಗೊಂಡಿರುವ ವಿಶೇಷ ಶಿಲೆಯಾಗಿದೆ. ವಿಶ್ವದಲ್ಲಿ ದಕ್ಷಿಣ ಆಫ್ರಿಕಾ ಬಿಟ್ಟರೆ ಇಲ್ಲಿ ಮಾತ್ರ ಈ ಶೀಲಾ ಸಂರಚನೆ ಕಂಡುಬಂದಿದೆ. ಈ ಶಿಲೆಗಳನ್ನು ಭೂ ವಿಜ್ಞಾನಿಗಳ ತರಬೇತಿ ಮತ್ತು ಅಧ್ಯಯನಕ್ಕಾಗಿ ಬಳಸಲಾಗುತ್ತದೆ’ ಎಂದು ವಿವರಿಸಿದರು.

‘ವಿದೇಶಿಯರು ಇಲ್ಲಿಗೆ ಭೇಟಿ ನೀಡಿ ಬಂಡೆ ಬಗ್ಗೆ ಅಧ್ಯಯನ ನಡೆಸಬಹುದು. ಇಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರ ಮತ್ತು ಜಿಎಸ್‌ಐ ಈ ಬಂಡೆ ಬಗ್ಗೆ 1974ರಲ್ಲೇ ಜಂಟಿ ಸರ್ವೆ ನಡೆಸಿ ರಾಷ್ಟ್ರೀಯ ಭೂಸ್ಮಾರಕವಾಗಿ ಘೋಷಿಸಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಪೆದ್ದಪಲ್ಲಿ ಮತ್ತು ಸ್ಕೂಲ್ ಆಫ್ ಮೈನ್ಸ್ ಬಳಿ ಆಗಲೇ 2 ಫಲಕ ಅಳವಡಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

ಕೆಜಿಎಫ್‌ ತಹಶೀಲ್ದಾರ್ (ಪ್ರಭಾರ) ಬಿ.ಕೆ.ಚಂದ್ರಮೌಳೇಶ್ವರ, ಉಪ ತಹಶೀಲ್ದಾರ್ ರಘುರಾಮ್‌ಸಿಂಗ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !