ಸೋಮವಾರ, ಡಿಸೆಂಬರ್ 16, 2019
26 °C
ನಗರವಾಸಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಎಚ್ಚರಿಕೆ

ಮನಸೋಇಚ್ಛೆ ಕಸ ವಿಲೇವಾರಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಗರವಾಸಿಗಳು ಮನಬಂದಂತೆ ಎಲ್ಲೆಂದರಲ್ಲಿ ಕಸ ಎಸೆದರೆ ದಂಡ ವಿಧಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ಘನ ತ್ಯಾಜ್ಯ ವಿಲೇವಾರಿ ಕುರಿತು ನಗರಸಭೆ ನೂತನ ಸದಸ್ಯರು, ಸಾರ್ವಜನಿಕರು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗಲು ಜನರೇ ಕಾರಣ. ಜನರಲ್ಲಿ ಸ್ವಚ್ಛತಾ ಮನೋಭಾವ ಇದ್ದಿದ್ದರೆ ನಗರ ಸ್ವಚ್ಛವಾಗಿ ಇರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ನಗರದಲ್ಲಿ ಪ್ರತಿನಿತ್ಯ ಸುಮಾರು 70 ಟನ್ ಕಸ ಉತ್ಪತ್ತಿಯಾಗುತ್ತಿದೆ. ಕನಿಷ್ಠ 2 ದಿನ ಕಸ ವಿಲೇವಾರಿ ಮಾಡದಿದ್ದರೆ ಬಡಾವಣೆಗಳ ಪರಿಸ್ಥಿತಿ ಏನಾಗುತ್ತದೆ ಎಂದು ಆಲೋಚಿಸಬೇಕು. ಮನೆ ಬಾಗಿಲಲ್ಲೇ ಕಸ ಸಂಗ್ರಹಿಸಲು ನಗರಸಭೆಯಿಂದ 17 ಆಟೊ ಖರೀದಿಸಲಾಗಿದೆ. ನಗರವಾಸಿಗಳು ಎಲ್ಲೆಂದರಲ್ಲಿ ಕಸ ಬಿಸಾಡದೆ ನಗರಸಭೆ ಆಟೊಗಳಿಗೆ ಕೊಡಬೇಕು’ ಎಂದು ಮನವಿ ಮಾಡಿದರು.

‘ನಗರಸಭೆ ವ್ಯಾಪ್ತಿಯಲ್ಲಿ 125 ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇನ್ನು 131 ಪೌರ ಕಾರ್ಮಿಕರ ಅವಶ್ಯಕತೆಯಿದೆ. ನಗರದಲ್ಲಿ ತೆರಿಗೆ ವಸೂಲಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿ ಆಗುತ್ತಿಲ್ಲ. ನಾಗರಿಕರು ಸಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು’ ಎಂದು ಸಲಹೆ ನೀಡಿದರು.

ಜಾಗ ಗುರುತು: ‘ಕಸ ವಿಲೇವಾರಿಗೆ ಸರ್ಕಾರಿ ಜಾಗ ಗುರುತಿಸಿದರೆ ಕೆಲ ವ್ಯಕ್ತಿಗಳು ವೈಯಕ್ತಿಕ ಪ್ರತಿಷ್ಠೆಗಾಗಿ ಜನರನ್ನು ಎತ್ತಿ ಕಟ್ಟುತ್ತಾರೆ. ನ್ಯಾಯಾಲಯದ ಆದೇಶದಂತೆ ಜಾಗ ಗುರುತಿಸಿದರೂ ಜನ ಸಹಕರಿಸದಿರುವುದು ದುರಂತ. ಈಗಾಗಲೇ ಗುರುತಿಸಿರುವ ಜಾಗದ ಸುತ್ತಲೂ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಅಡ್ಡಿಪಡಿಸಿದರೆ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ನಗರಸಭೆ ಅಧಿಕಾರಿಗಳು ಪ್ರತಿ ತಿಂಗಳು ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಬೇಕು. ಕೆಲವರು ನಗರಸಭೆಯಿಂದ ಎಲ್ಲಾ ಸೌಕರ್ಯ ಪಡೆದು ತೆರಿಗೆ ಪಾವತಿಸದೆ ವಂಚಿಸುತ್ತಿದ್ದಾರೆ. ಸಿಬ್ಬಂದಿಯು ತೆರಿಗೆ ವಸೂಲಿಯಲ್ಲಿ ನಿರ್ಲಕ್ಷ್ಯ ತೋರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಗುಡುಗಿದರು.

ದಂಡ ವಿಧಿಸಿ: ‘ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಪ್ಲಾಸ್ಟಿಕ್ ನಿಷೇಧ ಸಂಪೂರ್ಣವಾಗಿ ಜಾರಿಯಾದರೆ ಕಸದ ಸಮಸ್ಯೆ ಶೇ 50ರಷ್ಟು ನಿವಾರಣೆಯಾಗುತ್ತದೆ. ನಾಗರಿಕರು ತಕ್ಷಣಕ್ಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಇದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುವುದನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು’ ಎಂದು ಘನ ತ್ಯಾಜ್ಯ ನಿರ್ವಹಣೆ ತಜ್ಞ ರಮಾಕಾಂತ್ ಸಲಹೆ ನೀಡಿದರು.

‘ಕಸ ವಿಂಗಡಣೆ ಬಗ್ಗೆ ಪ್ರತಿ ವಾರ್ಡ್‌ನಲ್ಲೂ ಅರಿವು ಮೂಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ವ್ಯಕ್ತಿಗಳಿಗೆ ದಂಡ ವಿಧಿಸಿದರೆ ಬೇರೆಯವರು ಎಚ್ಚೆತ್ತುಕೊಳ್ಳುತ್ತಾರೆ. ಕೋಲಾರಮ್ಮ ಕೆರೆ ಅಂಗಳದಲ್ಲಿ ಹಳೇ ಕಟ್ಟಡಗಳ ನಿರುಪಯುಕ್ತ ಸಾಮಗ್ರಿ ಸುರಿಯಲಾಗಿದೆ. ಕೆಲ ವ್ಯಕ್ತಿಗಳು ಕೆರೆಯಂಗಳ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಒತ್ತುವರಿ ತೆರವುಗೊಳಿಸಬೇಕು’ ಎಂದು ನಗರಸಭೆ ಸದಸ್ಯ ಎನ್.ಅಂಬರೀಶ್ ಕೋರಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಮಮೂರ್ತಿ, ನಗರಸಭೆ ಆಯುಕ್ತ ಶ್ರೀಕಾಂತ್, ಸಮುದಾಯ ಸಂಘಟನಾಧಿಕಾರಿ ಶಿವಪ್ರಕಾಶ್, ಮಾಜಿ ಸದಸ್ಯ ತ್ಯಾಗರಾಜ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)