ಭಾನುವಾರ, ಆಗಸ್ಟ್ 25, 2019
23 °C
ಸಮಸ್ಯೆ ಬಗೆಹರಿಸಿಕೊಳ್ಳಲು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ

ಆ.23ಕ್ಕೆ ಪಿಂಚಣಿ ಅದಾಲತ್

Published:
Updated:
Prajavani

ಕೋಲಾರ: ‘ನಿವೃತ್ತ ನೌಕರರಿಗೆ ಹಾಗೂ ಹಿರಿಯ ನಾಗರಿಕರಿಗೆ ಪಿಂಚಣಿ ಕಲ್ಪಿಸಲು ಇರುವ ಸಮಸ್ಯೆಗಳನ್ನು ಬಗೆಹರಿಸಲು ಆ.23ರಂದು ನಗರ ತಾಲ್ಲೂಕು ಕಚೇರಿಯಲ್ಲಿ ಪಿಂಚಣಿ ಅದಾತ್ ಹಮ್ಮಿಕೊಳ್ಳಲಾಗಿದ್ದು, ಸ್ಥಳದಲೇ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಖಜಾನೆ ಇಲಾಖೆ ಹಾಗೂ ಬ್ಯಾಂಕ್‌ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಪಿಂಚಣಿ ಅಹವಾಲು ಸ್ವೀಕಾರ ಸಭೆ ನಡೆಸಲಾಗುತ್ತಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಕೋರಿದರು.

‘ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ನಿವೃತ್ತ ನೌಕರರ ಹಾಗೂ ಹಿರಿಯ ನಾಗಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಅದನ್ನು ಪ್ರತಿಯೊ ಕ್ಷೇತ್ರದಲ್ಲೂ ಪಾಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

ಪಿಂಚಣಿ ಸಣ್ಣ ಉಳಿತಾಯ ಆಸ್ತಿ ಋಣ ಇಲಾಖೆಯ ಸಹಾಯಕ ನಿರ್ದೇಶಕ ಡಿ.ನಾರಾಯಣಸ್ವಾಮಿ ಮಾತನಾಡಿ, ‘ಜಿಲ್ಲೆಯಲ್ಲಿ 12 ಸಾವಿರಕ್ಕೂ ಹೆಚ್ಚು ನಿವೃತ್ತ ನೌಕರರು ಇದ್ದು, ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಪಾವತಿ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಮರೆಡ್ಡಿ ಮಾತನಾಡಿ, ‘ಪ್ರತಿ ರಂಗದಲ್ಲೂ ಹಿರಿಯ ನಾಗರಿಕರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ, ಬ್ಯಾಂಕ್‌ಗಳ ನಿಬಂಧಕರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ, ಶ್ರೀನಿವಾಸಪುರ ಎಸ್‌ಬಿಐ ಬ್ಯಾಂಕ್‌ನಲ್ಲಿ ತೀವ್ರ ಸಮಸ್ಯೆ ಎದುರಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

‘ಎಸ್‌ಬಿಐ ಬ್ಯಾಂಕಿನವರು ಹಿರಿಯ ನಾಗರಿಕರಿಗೆ ಬಹಳ ಕಿರಿಕಿರಿ ಉಂಟು ಮಾಡುತ್ತಾರೆ. ಹಣ ಪಡೆದುಕೊಳ್ಳಲು ಹೋದರೆ ವಿನಾಕಾರಣ ಅಲೆದಾಡಿಸುತ್ತಾರೆ. ಈ ಬ್ಯಾಂಕಿನಿಂದ ಬೇರೆ ಬ್ಯಾಂಕಿಗೆ ಖಾತೆ ಬದಲಾವಣೆ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಬ್ಯಾಂಕ್‌ಗಳ ವಿರುದ್ಧ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿವೆ. ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಪಿಂಚಣಿ ಖಾತೆಯನ್ನು ಬದಲಾಯಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಜೀವನದಲ್ಲಿ ಎಲ್ಲರೂ ಹಿರಿಯ ನಾಗರಿಕರಾಗುತ್ತಾರೆ. ಆದರೆ ಸೇವೆಯಲ್ಲಿ ಇದ್ದಷ್ಟು ದಿನ ಕೈಯಲಾದಷ್ಟು ಸಹಾಯ ಮಾಡಬೇಕು. ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು’ ಎಂದು ಹೇಳಿದರು.

Post Comments (+)