ಶನಿವಾರ, ಅಕ್ಟೋಬರ್ 23, 2021
21 °C
ಧೈರ್ಯದಿಂದ ದೂರು ಕೊಡಿ: ಎಸಿಬಿ ಇನ್‌ಸ್ಪೆಕ್ಟರ್‌ ಫಾರೂಖ್ ಮನವಿ

ಭ್ರಷ್ಟಾಚಾರ ನಿರ್ಮೂಲನೆಗೆ ಜನರು ಸಹಕರಿಸಿ: ಎಸಿಬಿ ಇನ್‌ಸ್ಪೆಕ್ಟರ್‌ ಫಾರೂಖ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಅಂತಹವರ ವಿರುದ್ಧ ಧೈರ್ಯದಿಂದ ಎಸಿಬಿಗೆ ದೂರು ಕೊಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಿ’ ಎಂದು ಭ್ರಷ್ಟಾಚಾರ ನಿಗ್ರಹ ದಳದ ಇನ್‌ಸ್ಪೆಕ್ಟರ್‌ ಫಾರೂಖ್ ಮನವಿ ಮಾಡಿದರು.

ಭ್ರಷ್ಟಾಚಾರ ನಿಗ್ರಹ ದಳವು ತಾಲ್ಲೂಕಿನ ದೊಡ್ಡ ಹಸಾಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ಕಾಯ್ದೆ ಜಾರಿ ಮಾಡಿದ್ದು, ಇದನ್ನು ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಬೇಕು. ದೂರು ಕೊಡುವವರ ಹೆಸರು ಮತ್ತು ಮಾಹಿತಿ ಗೋಪ್ಯವಾಗಿಟ್ಟು ತಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದರು.

‘ಜನರು ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ಬಿಡಬೇಕು. ಕೆಲಸ ಮಾಡುವುದು ಸರ್ಕಾರಿ ಅಧಿಕಾರಿಯ ಜವಾಬ್ದಾರಿ. ಭ್ರಷ್ಟಾಚಾರ ತಡೆಗಟ್ಟಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಿದೆ’ ಎಂದು ವಿವರಿಸಿದರು.

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಮತ್ತು ಸರ್ಕಾರಿ ನೌಕರರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದರೆ ಆ ಬಗ್ಗೆ ಸೂಕ್ತ ದಾಖಲೆಪತ್ರಗಳ ಸಮೇತ ದೂರು ನೀಡಬಹುದು. ಈ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಬೇಕು’ ಎಂದು ಸೂಚಿಸಿದರು.

ಹೆಮ್ಮರವಾಗಿ ಬೆಳೆದಿದೆ: ‘ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದೆ. ಇದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು. ಇದಕ್ಕೆ ಜನರ ಸಹಕಾರ ಅಗತ್ಯ. ಜನರ ತೆರಿಗೆ ಹಣದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಬರುತ್ತದೆ. ನೌಕರರಿಗೆ ಹಣ ಕೊಡದೇ ಕೆಲಸ ಮಾಡಿಸಿಕೊಳ್ಳುವ ಪ್ರವೃತ್ತಿ ಜನರಿಂದಲೇ ಆರಂಭವಾಗಬೇಕು’ ಎಂದು ಎಸಿಬಿ ಇನ್‌ಸ್ಪೆಕ್ಟರ್‌ ಮಂಜುನಾಥ್ ಕಿವಿಮಾತು ಹೇಳಿದರು.

ಸಭೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ ದಿಂಬ ಗ್ರಾಮದ ಟೈಲರ್ ಆನಂದ್, ‘ಗ್ರಾ.ಪಂನಲ್ಲಿ ಬಡವರಿಗೆ ಅಧಿಕಾರಿಗಳು ತಾರತಮ್ಯ ಮಾಡುತ್ತಾರೆ. ಗ್ರಾ.ಪಂ ಕಚೇರಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಪ್ರಭಾವಿಗಳಿಂದ ಒತ್ತಡ ತರುತ್ತಾರೆ. ಗ್ರಾ.ಪಂ ಕಾಮಗಾರಿಗಳು ಕೇವಲ ಫೋಟೊಗೆ ಸೀಮಿತವಾಗಿವೆ. ಈ ಬಗ್ಗೆ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.

ದೊಡ್ಡ ಹಸಾಳ ಗ್ರಾ.ಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಿ.ಆರ್‌.ಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು