ಸೋಮವಾರ, ಜನವರಿ 24, 2022
28 °C
ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿ: ಮಾಂಸದ ವಹಿವಾಟು ಭರ್ಜರಿ

ಕೋವಿಡ್ ಮಾರ್ಗಸೂಚಿ ಮರೆತ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ನಡುವೆಯೂ ಭಾನುವಾರ ಮಾಂಸ ಮತ್ತು ಮೀನಿನ ವಹಿವಾಟು ಭರ್ಜರಿಯಾಗಿ ನಡೆಯಿತು. ಕೋವಿಡ್‌ 3ನೇ ಅಲೆ ಭೀತಿ ನಡುವೆಯೂ ಗ್ರಾಹಕರು ಮಾಂಸ ಖರೀದಿಗೆ ಮುಗಿಬಿದ್ದರು.

ಕೋಳಿ, ಕುರಿ ಮಾಂಸ ಹಾಗೂ ಮೀನಿನ ಅಂಗಡಿ ಮಾಲೀಕರು ನಸುಕಿನಲ್ಲೇ ಮಳಿಗೆಯ ಬಾಗಿಲು ತೆರೆದು ವಹಿವಾಟು ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ಮುಂಜಾನೆಯೇ ಕುರಿ ಹಾಗೂ ಮೇಕೆಗಳನ್ನು ಕೊಯ್ದು ಮಾಂಸ ಮಾರಾಟ ಮಾಡಲಾಯಿತು.

ಜಿಲ್ಲಾ ಕೇಂದ್ರದ ಅಮ್ಮವಾರಿಪೇಟೆ, ಕ್ಲಾಕ್‌ಟವರ್‌, ಎಂ.ಬಿ ರಸ್ತೆ ಸುತ್ತಮುತ್ತಲಿನ ಕೋಳಿ, ಮೀನು ಹಾಗೂ ಕುರಿ ಮಾಂಸದ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಅಂಗಡಿಗಳ ಮುಂದೆ ಗ್ರಾಹಕರು ಮಾಂಸ ಖರೀದಿಗೆ ಸಾಲುಗಟ್ಟಿ ನಿಂತಿದ್ದರು. ಎಂ.ಬಿ ರಸ್ತೆಯ ಅಕ್ಕಪಕ್ಕ ನಾಟಿ ಕೋಳಿ ವಹಿವಾಟು ಭರ್ಜರಿಯಾಗಿತ್ತು. ಮೀನಿನ ವ್ಯಾಪಾರವೂ ಜೋರಾಗಿತ್ತು. ಅಮ್ಮವಾರಿಪೇಟೆ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಕಂಡುಬಂತು.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಂಗಳೂರಿನಿಂದ ತರಿಸಲಾಗಿದ್ದ ಮೀನುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು. ಗ್ರಾಮೀಣ ಪ್ರದೇಶದಿಂದ ರೈತರು ತಂದಿದ್ದ ನಾಟಿ ಕೋಳಿಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು. ಕುರಿ ಹಾಗೂ ಕೋಳಿ ಮಾಂಸದ ಅಂಗಡಿ ಮಾಲೀಕರು ಗ್ರಾಹಕರಿಂದ ಮುಂಗಡ ಹಣ ಪಡೆದು ಟೋಕನ್‌ ನೀಡಿ ನಂತರ ಮಾಂಸ ವಿತರಿಸಿದರು.

ಕದ್ದುಮುಚ್ಚಿ ವಹಿವಾಟು: ಕೋವಿಡ್‌ 3ನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಮುಂದುವರಿಯಿತು. ಬೆರಳೆಣಿಕೆ ವ್ಯಾಪಾರಿಗಳು ಕದ್ದುಮುಚ್ಚಿ ಅಂಗಡಿ ಬಾಗಿಲು ತೆರೆದು ವಹಿವಾಟು ನಡೆಸಿದರು.

ಆಹಾರ ಪದಾರ್ಥಗಳು, ಹಾಲು, ಹಣ್ಣು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ಪ್ರತಿನಿತ್ಯದಂತೆ ತೆರೆದಿದ್ದವು. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಎಪಿಎಂಸಿಗಳಲ್ಲಿ ಅಡೆತಡೆಯಿಲ್ಲದೆ ವಹಿವಾಟು ನಡೆಯಿತು. ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು, ಸರಕು ಸಾಗಣೆ ವಾಹನಗಳು ಸೇವೆ ಒದಗಿಸಿದವು. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆಯಿತ್ತು.

ಕೃಷಿ ಚಟುವಟಿಕೆಗೆ ಸಂಬಂಧಿಸಿದ ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಉಪಕರಣ ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಲಾಯಿತು. ಬಟ್ಟೆ, ಚಿನ್ನಾಭರಣ, ಸ್ಟೇಷನರಿ, ಮೊಬೈಲ್‌ ಮಾರಾಟ ಮಳಿಗೆಗಳು, ಬೈಕ್‌ ಮತ್ತು ಕಾರು ಶೋರೂಂಗಳು ಸಂಪೂರ್ಣ ಬಂದ್‌ ಆಗಿದ್ದವು. ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಯಿತು.

ಚರ್ಚ್‌, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಜನರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು.

ಆಟಕ್ಕುಂಟು ಲೆಕ್ಕಕ್ಕಿಲ್ಲ: ಎಪಿಎಂಸಿಗಳು, ಮಾರುಕಟ್ಟೆ, ವಾಣಿಜ್ಯ ಪ್ರದೇಶಗಳಲ್ಲಿ ಕೋವಿಡ್‌ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿಯಿತ್ತು. ಎಪಿಎಂಸಿ ಮಂಡಿಗಳು ರೈತರು, ದಲ್ಲಾಳಿಗಳಿಂದ ತುಂಬಿ ಹೋಗಿದ್ದವು. ಎಪಿಎಂಸಿಗಳಲ್ಲಿ ಬಹುಪಾಲು ರೈತರು, ಮಂಡಿ ಮಾಲೀಕರು, ವರ್ತಕರು ಹಾಗೂ ದಲ್ಲಾಳಿಗಳು ಮಾಸ್ಕ್‌ ಧರಿಸಿರಲಿಲ್ಲ. ಮತ್ತೊಂದೆಡೆ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಎಪಿಎಂಸಿ ಅಧಿಕಾರಿಗಳು ಧ್ವನಿವರ್ಧಕದ ಮೂಲಕ ಎಚ್ಚರಿಕೆ ಸಂದೇಶ ನೀಡಿದರೂ ರೈತರು, ವರ್ತಕರು ಕೋವಿಡ್‌ ಮಾರ್ಗಸೂಚಿ ಪಾಲಿಸದೆ ನಿರ್ಲಕ್ಷ್ಯ ತೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.