ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್: ಕ್ರಿಸ್ಮಸ್‌ ಸಡಗರಕ್ಕೆ ಸಿದ್ಧಗೊಂಡ ಜನರು

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು
Last Updated 24 ಡಿಸೆಂಬರ್ 2020, 3:15 IST
ಅಕ್ಷರ ಗಾತ್ರ

ಕೆಜಿಎಫ್: ಜಾತ್ಯತೀತ ನೆಲೆಯಲ್ಲಿ ಕ್ರಿಸ್ಮಸ್ ಹಬ್ಬ ನೋಡಬೇಕೆಂದರೆ ಕೆಜಿಎಫ್ ನಗರಕ್ಕೆ ಬರಬೇಕು. ಬಹುತೇಕ ಎಲ್ಲ ಧರ್ಮೀಯರು ಈ ಹಬ್ಬವನ್ನು ತಮ್ಮದೇ ಹಬ್ಬ ಎಂಬ ರೀತಿಯಲ್ಲಿ ಆಚರಣೆ ಮಾಡುವಪದ್ಧತಿ ನಗರದಲ್ಲಿದೆ.

ಕ್ರಿಸ್ಮಸ್ ಸಂದರ್ಭದಲ್ಲಿ ಯುವಕರು ಸಮೀಪದ ಗ್ರಾಮಗಳಿಗೆ ತೆರಳಿ ಉದ್ದನೆಯ ಹುಲ್ಲು ಕಡ್ಡಿಗಳನ್ನು ತಂದು ರಾಶಿ ಹಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಹ ಮಾರಾಟಕ್ಕೆ ಸಿಗುತ್ತದೆ. ಅದರ ಜೊತೆಗೆ ಗುಂಡು ಕಲ್ಲುಗಳು, ಕ್ರಿಸ್ಮಸ್ ಟ್ರೀಗಳನ್ನು ತಂದು ಸಾರ್ವಜನಿಕ ಪ್ರದೇಶದಲ್ಲಿ ಕುಟೀರ ನಿರ್ಮಾಣ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಾಣಸಿಗುತ್ತಿದೆ.ಇಂತಹ ಕುಟೀರಗಳಲ್ಲಿ ಶೆಪರ್ಡ್‌ವಾಸ ಸ್ಥಳವನ್ನು ಆಕರ್ಷಕ ರೀತಿಯಲ್ಲಿ ಸಿದ್ಧಗೊಳಿಸುತ್ತಿದ್ದಾರೆ. ಅದಕ್ಕೆ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗುತ್ತಿದೆ.

ಬಟ್ಟೆ ಅಂಗಡಿಗಳು ಮತ್ತು ಚಿನ್ನಾಭರಣದ ಶೋರೂಂಗಳು ಸಹ ಕ್ರಿಸ್ಮಸ್ ಸಡಗರಕ್ಕೆ ಸಜ್ಜಾಗಿವೆ. ಗ್ರಾಹಕರನ್ನು ಸೆಳೆಯಲು ಹಲವಾರು ಕೊಡುಗೆಗಳನ್ನು ಜಾರಿಗೆ ತಂದಿದ್ದಾರೆ.

ಬ್ರಿಟಿಷರು ಮತ್ತು ಯೂರೋಪಿಯನ್ನರು ಚಿನ್ನದ ಗಣಿಯ ಆರಂಭದಲ್ಲಿ ನಗರದಲ್ಲಿ ವಾಸ ಮಾಡಲು ಶುರು ಮಾಡಿದಾಗ, ಕ್ರಿಸ್ಮಸ್ ಹಬ್ಬವನ್ನು ನಗರಕ್ಕೆ ಪರಿಚಯಿಸಿದರು. ನಂತರ ದಿನ ಕಳೆದಂತೆ ಕ್ರಿಶ್ಚಿಯನ್ ಧರ್ಮ ವ್ಯಾಪಕವಾಗಿ ಹಬ್ಬಿದಂತೆಲ್ಲಾ ಆಚರಣೆ ಕೂಡ ಸಾರ್ವತ್ರಿಕವಾಯಿತು.

ಚರ್ಚ್‌ಗಳು ಈಗಾಲೇ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಹಬ್ಬದ ದಿನದಂದು ಸಲ್ಲಿಸುವ ಪ್ರಾರ್ಥನೆಗಾಗಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ತಾಲೀಮು ಕೊನೆಯ ಹಂತ ತಲುಪಿದೆ. 25ರ ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕೋವಿಡ್ ಸಂದರ್ಭವಾಗಿರುವುದರಿಂದ ಶಾಲಾ ಮಕ್ಕಳು ಈಗ ಚರ್ಚ್‌ಗಳಿಗೆ ತೆರಳುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆ ಹೊತ್ತು ಕ್ರಿಸ್ಮಸ್ ದಿನದಂದು ನಡೆಯುವ ಸಾಂಸ್ಕೃತಿಕ ಚಟುವಟಿಕೆಗೆ ತಾಲೀಮು ನಡೆಸುತ್ತಿದ್ದಾರೆ.

ಕೆಜಿಎಫ್ ನಗರದಲ್ಲಿ ಸುಮಾರು 120ಕ್ಕೂ ಹೆಚ್ಚು ಚರ್ಚ್ ಮತ್ತು ಪ್ರಾರ್ಥನಾ ಮಂದಿರಗಳು ಇವೆ. ಸೇಂಟ್‌ ಜೋಸೆಫ್ ಕಾನ್ವೆಂಟ್‌ಗೆ ನೂರು ವರ್ಷ ದಾಟಿದೆ. ಕ್ರಿಶ್ಚಿಯನ್ ಸಮುದಾಯದ ರೋಮನ್ ಕ್ಯಾಥಲಿಕ್, ಪ್ರೊಟೆಸ್ಟೆಂಟ್, ಪೆಂಟಾಕಾಸ್ಟ್, ಸಿಎಸ್ಐ, ಎನ್ಎಸ್ಐ, ಸಿಲೋನ್ ಪೆಂಟಾಕಾಸ್ಟ್ ಹೀಗೆ ಹಲವಾರು ಪಂಗಡಗಳು ತಮ್ಮದೇ ಆದ ಚರ್ಚ್‌ಗಳನ್ನು ಕಟ್ಟಿಕೊಂಡಿದ್ದಾರೆ.

ಆಂಗ್ಲೋ ಇಂಡಿಯನ್ ಸಮುದಾಯ ಹೆಚ್ಚಾಗಿದ್ದ ಸಂದರ್ಭದಲ್ಲಿ ಕ್ರಿಸ್ಮಸ್ ವಿಶೇಷ ಕಳೆಯನ್ನು ಹೊಂದಿತ್ತು. ಆಂಗ್ಲೋ ಇಂಡಿಯನ್ ಶೈಲಿಯಲ್ಲಿ ಬಟ್ಟೆ ಧರಿಸಿದ ಸಮುದಾಯದ ಮಹಿಳೆಯರು ಆಕರ್ಷಣೆಯ ಬಿಂದುವಾಗಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕಡಿಮೆಯಾದ ಕಾರಣ, ಸಮುದಾಯದ ಆಕರ್ಷಣೆ ಉಳಿದಿಲ್ಲ.

ಕ್ರಿಸ್ಮಸ್‌ನಿಂದ ಹೊಸ ವರ್ಷವಾದ ಜನವರಿ ಒಂದರವರೆಗೂ ಮಾಂಸದ ಮಾರುಕಟ್ಟೆ ಕೂಡ ಸಿಂಗಾರ ಗೊಂಡಿರುತ್ತದೆ. ರಾಬರ್ಟ್‌ಸನ್‌ಪೇಟೆ ಮತ್ತು ಆಂಡರ್‌ಸನ್‌ಪೇಟೆ ಎಂ.ಜಿ.ಮಾರುಕಟ್ಟೆಯ ಮಾಂಸದ ಅಂಗಡಿಗಳ ಮುಂದೆ ಜನ ಕಿಕ್ಕಿರಿದು ತುಂಬಿರುತ್ತಾರೆ.

ಕೋವಿಡ್ ನಿಂದಾಗಿ ಶಾಲೆಗೆ ವಿರಾಮ ಸಿಕ್ಕಿರುವ ಮಕ್ಕಳು ಕಾಲೋನಿಗಳಲ್ಲಿ ಯುವಕರು ಏರ್ಪಡಿಸುವ ಶಪರ್ಡ್‌ ಶಿಬಿರದ ಬಳಿ ಸುಳಿದಾಡುತ್ತ ನಲಿಯುವ ದೃಶ್ಯ ಕಾಣಬಹುದು.

ವಿವಿಧ ಬಗೆಯ ಕೇಕ್‌ಗಳಿಗೆ ಬೇಡಿಕೆ: ಕ್ರಿಸ್ಮಸ್ ಸಂದರ್ಭದಲ್ಲಿ ತಮ್ಮ ಚರ್ಚ್‌ ಸದಸ್ಯರುಗಳಿಗೆ ಅಕ್ಕಿ, ಬೆಲ್ಲ, ಎಣ್ಣೆ, ಸಕ್ಕರೆ, ಬಟ್ಟೆ ಮೊದಲಾದ ದಿನೋಪಯೋಗಿ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಕ್ರಿಸ್ಮಸ್ ಎಂದ ಕ್ಷಣ ಕೇಕ್ ಜ್ಞಾಪಕಕ್ಕೆ ಬರುತ್ತದೆ. ನಗರವೊಂದರಲ್ಲೇ ಬಿಕರಿಯಾಗುವ ಲಕ್ಷಾಂತರ ಕೇಕ್‌ಗಳಿಗಾಗಿ ಕಳೆದ ಒಂದು ವಾರದಿಂದ ಬೇಕರಿ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೇಕಾಯಿಯ ವಿವಿಧ ತಿಂಡಿ ತಿನಿಸುಗಳು ಕೂಡ ಕ್ರಿಸ್ಮಸ್‌ಗೆ ಸಿದ್ಧಗೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT