ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರೋಪಕರಣದ ಗುಲಾಮರಾದ ಜನ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಳವಳ

ಚುಕ್ಕಿಮೇಳ
Last Updated 4 ಮೇ 2019, 14:26 IST
ಅಕ್ಷರ ಗಾತ್ರ

ಕೋಲಾರ: ‘ಆಧುನಿಕ ಯುಗದಲ್ಲಿ ಜನ ಯಂತ್ರೋಪಕರಣಗಳ ಗುಲಾಮರಾಗಿದ್ದು, ಪರಿಸರ ರಕ್ಷಣೆಯ ಕಾಳಜಿ ಇಲ್ಲದಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರ, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಆರಂಭವಾದ ಚುಕ್ಕಿಮೇಳ–2019ಕ್ಕೆ ಚಾಲನೆ ನೀಡಿ ಮಾತನಾಡಿ, ‘ಪಾಶ್ಚಿಮಾತ್ಯ ಸಂಸ್ಕೃತಿ ಅಂಧಾನುಕರಣೆಯಲ್ಲಿ ಯುವಕ ಯುವತಿಯರು ಮೊಬೈಲ್‌ ದಾಸರಾಗಿದ್ದಾರೆ’ ಎಂದು ವಿಷಾದಿಸಿದರು.

‘8 ವರ್ಷದಿಂದ -14 ವರ್ಷದೊಳಗಿನ ಮಕ್ಕಳು ವ್ಯವಸ್ಥಿತ ರೀತಿಯಲ್ಲಿ ತಮ್ಮ ಪ್ರತಿಭೆ ಹಂಚಿಕೊಳ್ಳಲು ಚುಕ್ಕಿ ಮೇಳ ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆ ನಡೆಸುವ ಸಂಸ್ಥೆಯಿರುವ ಬಗ್ಗೆ ನಾನು ಕೇಳಿದ್ದು, ಇಂದು ಕಂಡಿದ್ದೇನೆ. ಜಿಲ್ಲಾಡಳಿತದಿಂದ ಇಂತಹ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ಶಾಲೆಗಳಿಗಿಂತ ಪರಿಸರದ ಒಡನಾಟದಲ್ಲಿ ಕಲಿಕೆ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಬೇಕು. ಶಾಲೆಗಳಲ್ಲಿ ಆಟ ಪಾಠ ಕಲಿತರೆ ಪರಿಸರದಲ್ಲಿ ಪ್ರಾಯೋಗಿಕವಾಗಿ ಸಾಕಷ್ಟು ವಿಚಾರ ಕಲಿಯಲು ಅವಕಾಶವಿದೆ. ಇದಕ್ಕೆ ಒತ್ತು ನೀಡಬೇಕು. ಮಕ್ಕಳು ಬಾಲ್ಯದಲ್ಲಿ ಲವಲವಿಕೆಯಿಂದ ಇರುವ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

2005ರಲ್ಲಿ ಆರಂಭ: ‘ಸಾಂಸ್ಕೃತಿಕ ಕೇಂದ್ರ ಕಟ್ಟಬೇಕೆಂದು 1995ರಲ್ಲಿ ಒಂದಷ್ಟು ಜನ ಮಾತನಾಡಿಕೊಂಡು, ಮನೆಗೊಂದು ಹುಂಡಿ-ದಿನಕ್ಕೆ ಒಂದು ರೂಪಾಯಿ ಎಂದು ತೀರ್ಮಾನಿಸಿದೆವು. ನಂತರ 2005ಕ್ಕೆ ₹ 36 ಸಾವಿರ ಸಂಗ್ರಹವಾಗಿತ್ತು. ಆಗ ಬ್ಯಾಂಕ್‌ನಲ್ಲಿ ಹಣ ಠೇವಣಿಯಿಟ್ಟು ಕೇಂದ್ರ ಆರಂಭಿಸಲಾಯಿತು’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ ವಿವರಿಸಿದರು.

‘ಮುಂದಿನ ಪೀಳಿಗೆಯ ಉಳಿವು, ದಮನಿತ ಕಲಾವಿದರ ಕಲೆಗಳ ಜೀವಂತಗೊಳಿಸುವಿಕೆ ಸೇರಿದಂತೆ ವಿವಿಧ ಆಶಯಗಳ ಈಡೇರಿಕೆಗೆ ಪಣ ತೊಟ್ಟಿದ್ದೇವೆ. ಈವರೆಗೆ 157 ಹುಣ್ಣಿಮೆ ಹಾಡು ಕಾರ್ಯಕ್ರಮ ನಡೆಸಿದ್ದು, ಪ್ರತಿ ವರ್ಷ ಮಕ್ಕಳಿಗಾಗಿ ಚುಕ್ಕಿಮೇಳವನ್ನು ನಡೆಸುತ್ತಾ ಬಂದಿದ್ದೇವೆ. ಪೋಷಕರು, ಶಿಕ್ಷಣ ಸಂಸ್ಥೆಯವರು ಅರಿಯದ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿದ್ದೇವೆ’ ಎಂದು ತಿಳಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಶಿಕ್ಷಣ ತಜ್ಞ ಶ್ರೀರಾಮರೆಡ್ಡಿ, ಸಂಪನ್ಮೂಲ ವ್ಯಕ್ತಿ ಎ.ವೆಂಕಟರೆಡ್ಡಿ, ರಂಗ ನಿರ್ದೇಶಕ ಜಗದೀಶ್ ಕೆಂಗನಾಳ್, ರಾಜ್ಯ ನಾಟಕ ಅಕಾಡೆಮಿ ಸದಸ್ಯ ರಾಮಕೃಷ್ಣ ಬೆಳ್ತೂರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT