ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಗ್ಲಾಕೋಮಾ ನಿರ್ಲಕ್ಷಿಸಿದರೆ ಶಾಶ್ವತ ಅಂಧತ್ವ: ಜಿಲ್ಲಾಧಿಕಾರಿ

ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹೇಳಿಕೆ
Last Updated 7 ಮಾರ್ಚ್ 2022, 15:43 IST
ಅಕ್ಷರ ಗಾತ್ರ

ಕೋಲಾರ: ‘ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ದೃಷ್ಟಿ ಇಲ್ಲವೆಂದರೆ ಬದುಕೇ ಕತ್ತಲು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಗ್ಲಾಕೋಮಾ ಸಪ್ತಾಹ ಮತ್ತು ಜನೌಷಧ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮನುಷ್ಯನ ದೇಹಕ್ಕೆ ಸಾವುಂಟು. ಆದರೆ, ಕಣ್ಣಿಗೆ ಸಾವಿಲ್ಲ. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಜಾಗರೂಕತೆಯಿಂದ ಕಣ್ಣು ಕಾಪಾಡಿಕೊಳ್ಳಬೇಕು. ಕಣ್ಣಿನ ಸಮಸ್ಯೆಗೆ ಅನೇಕ ಕಾರಣಗಳಿವೆ. ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷಿಸದೆ ವೈದ್ಯರಿಂದ ತಪಾಸಣೆ ಮಾಡಿಸಿ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ. ಗ್ಲಾಕೋಮಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸಿದರೆ ಶಾಶ್ವತ ಅಂಧತ್ವ ಉಂಟಾಗುತ್ತದೆ’ ಎಂದರು.

‘ಕಣ್ಣು ಇದ್ದವರು ಮಾತ್ರ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತಿಳಿಯಲು ಮತ್ತು ಪ್ರಕೃತಿಯ ಸೌಂದರ್ಯ ಸವಿಯಲು ಸಾಧ್ಯ. ಕಣ್ಣು ಕಾಣದವರಿಗೆ ಅದರ ಬೆಲೆ ಗೊತ್ತು. ಜಾಗತಿಕವಾಗಿ ಸಾಕಷ್ಟು ಮಂದಿ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಕಣ್ಣು ಇಲ್ಲದವರ ಬದುಕು ಕತ್ತಲೆಗೆ ಸಮಾನ. ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷಿಸದೆ ವೈದ್ಯರಿಂದ ತಪಾಸಣೆ ಮಾಡಿಸಿ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‍ಪರೀಕ್ಷೆ ಮಾಡಿಸಿ: ‘ಪ್ರತಿ ವರ್ಷ ಮಾರ್ಚ್‌ನಲ್ಲಿ ವಿಶ್ವ ಗ್ಲಾಕೋಮಾ ನಿರ್ಮೂಲನೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 6ರಿಂದ 12ರವರೆಗೂ ಹಳ್ಳಿ ಹಂತದಿಂದ ಇದನ್ನೂ ಆಚರಿಸುತ್ತಿದ್ದೇವೆ. ಯಾವುದೇ ರೋಗ ಲಕ್ಷಣವಿಲ್ಲದೆ ಕಾಣಿಸಿಕೊಳ್ಳುವ ಕಾಯಿಲೆ ಗ್ಲಾಕೋಮಾ. ಗ್ಲಾಕೋಮಾದ ತೊಂದರೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. 40 ವರ್ಷ ವಯಸ್ಸಿನ ನಂತರ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಎನ್‌.ಸಿ.ನಾರಾಯಣಸ್ವಾಮಿ ಸಲಹೆ ನೀಡಿದರು.

‘ಮಧುಮೇಹ, ರಕ್ತದೊತ್ತಡ ಹಾಗೂ ದೃಷ್ಟಿ ದೋಷ ಇರುವವರಲ್ಲಿ ಗ್ಲಾಕೋಮಾ ಸಂಭವ ಹೆಚ್ಚು. ಗ್ಲಾಕೋಮಾದಲ್ಲಿ ನೇರ ದೃಷ್ಟಿ ಸರಿಯಾಗಿದ್ದರೂ ದೃಷ್ಟಿ ವಲಯ ಕುಗ್ಗುತ್ತಾ ಬರುತ್ತದೆ. ಮನೆಯಲ್ಲಿ ಯಾರಾದರೂ ಗ್ಲಾಕೋಮಾದಿಂದ ಬಳಲುತ್ತಿದ್ದರೆ ಆ ಮನೆಯ ಇತರೆ ಸದಸ್ಯರು ಕಡ್ಡಾಯವಾಗಿ ಕಣ್ಣಿನ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಭಾರತದಲ್ಲಿ 1 ಮಿಲಿಯನ್ ಜನರು ಗ್ಲಾಕೋಮಾ ರೋಗದಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ 508 ಜನರಲ್ಲಿ ಗ್ಲಾಕೋಮಾ ಕಾಯಿಲೆಯಿದೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ವಯಸ್ಸಿನವರಲ್ಲೇ ಹೆಚ್ಚಾಗಿ ಗ್ಲಾಕೋಮಾ ಕಾಣಿಸಿಕೊಳ್ಳುತ್ತಿದೆ. ಮೊಬೈಲ್‌, ಕಂಪ್ಯೂಟರ್‌, ಟಿ.ವಿ ವೀಕ್ಷಣೆಯಿಂದ ಮಕ್ಕಳಲ್ಲಿ ದೃಷ್ಟಿ ದೋಷ ಉಂಟಾಗುತ್ತಿದೆ. ಇದರ ನಿವಾರಣೆಗೆ ಪೌಷ್ಟಿಕ ಆಹಾರ ಸೇವಿಸಬೇಕು. ಜತೆಗೆ ಹಸಿರು ತರಕಾರಿ, ಮೊಳಕೆ ಕಟ್ಟಿದ ಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮ್ಯ ದೀಪಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT