ಶನಿವಾರ, ನವೆಂಬರ್ 16, 2019
22 °C
ಶ್ರೀರಾಮ ಸೇನೆ ಕಾರ್ಯಕರ್ತರಿಂದ ಧರಣಿ

ಶೋಭಾಯಾತ್ರೆಗೆ ಅನುಮತಿ ರದ್ದು

Published:
Updated:
Prajavani

ಕೋಲಾರ: ಚಿಕ್ಕಮಗಳೂರಿನಲ್ಲಿ ದತ್ತಮಲಾ ಅಭಿಯಾನದ ಶೋಭಾಯಾತ್ರೆಗೆ ಅನುಮತಿ ನೀಡದ ತಾಲ್ಲೂಕು ಆಡಳಿತದ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಧರಣಿ ನಡೆಸಿದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‌ಗೌಡ ಮಾತನಾಡಿ, ‘ದತ್ತಮಾಲಾ ಆಭಿಯಾನದ ಶೋಭಾಯಾತ್ರೆಯಲ್ಲಿ ಕಲ್ಲಿನ ದತ್ತಾತ್ರೇಯ ವಿಗ್ರಹದ ಮೆರವಣಿಗೆ ನಿಷೇದಿಸಿರುವ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಗಮನಕ್ಕೆ ತಂದರೂ ಸ್ಪಂದಿಸದೇ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.

‘ಚಿಕ್ಕಮಗಳೂರಿನ ದತ್ತಾತ್ರೆಯ ಸ್ವಾಮಿ ಪೀಠಕ್ಕೆ ಶ್ರೀರಾಮಸೇನೆ ವತಿಯಿಂದ ದತ್ತಾತ್ರೆಯ ಶೋಭಾಯಾತ್ರೆ ನಡೆಸಿಕೊಂಡು ಬಂದಿದ್ದು, ಇದರ ಅಂಗವಾಗಿ ದತ್ತಾತ್ರೆಯ ವಿಗ್ರಹದ ಮೆರವಣಿಗೆಗೆ ಅನುಮತಿ ನೀಡದೇ ದಾರ್ಮಿಕ ವಿಷಯದಲ್ಲಿ ಕಾನೂನುಬಾಹಿರವಾಗಿ ಹಸ್ತಕ್ಷೇಕ ಮಾಡಿದ್ದಾರೆ ’ ಎಂದು ದೂರಿದರು.

‘ಹಲವು ರೀತಿಯ ದತ್ತಾತ್ರೆಯ ವಿಗ್ರಹಗಳನ್ನು ಶೋಭಾಯಾತ್ರೆ ಮೆರವಣಿಗೆ ಮಾಡಿದಾಗ ಯಾವುದೇ ತೊಂದರೆಯಾಗಿರಲಿಲ್ಲ. ಈ ಬಾರಿ ರಾಜಕೀಯ ಒತ್ತಡಕ್ಕೆ ಮಣಿದು ಹಿಂದುಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕೆಲಸ ಚಿಕ್ಕಮಗಳೂರಿನ ತಹಶೀಲ್ದಾರ್ ಮಾಡಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘2018ರ ವಿಧಾನ ಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರುವುದಾಗಿ ಹರಕೆ ಮಾಡಿಕೊಂಡಿದ್ದರು, ಅಧಿಕಾರ ಸ್ವೀಕರಿಸಿದ ಮೇಲೆ ದತ್ತಪೀಠವನ್ನೇ ಮರೆತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಾಜಿ ಮುಖ್ಯಮಾತ್ರಿ ಎಚ್.ಡಿ ಕುಮಾರಸ್ವಾಮಿ ದತ್ತಮಾಲಾಧಾರಿಗಳನ್ನು ಭಿಕ್ಷುಕರು ಎಂದಿದ್ದರು ಹೇಳಿಕೆ ನೀಡಿದ 15 ದಿನಗಳಲ್ಲಿ ಸರ್ಕಾರ ಉರುಳಿತು, ಇದೇ ರೀತಿ ದತ್ತಪೀಠಕ್ಕೆ ದತ್ತಮಾಲಾಧಾರಿಗಳಿಗೆ, ದತ್ತ ಗುರುಗಳಿಗೆ ಮೋಸಮಾಡಿದವರೆಲ್ಲಾ ತಕ್ಕ ಶಿಕ್ಷೆ ಅನುಭವಿಸಿದ್ದಾರೆ. ಅದೇ ರೀತಿ ಸಿಟಿ ರವಿಯವರು ಸಹ ದತ್ತಪೀಠಕ್ಕೆ ಹಾಗೂ ಹಿಂದೂಗಳ ಧಾರ್ಮಿಕ ಹಕ್ಕು ಚ್ಯುತಿಗೊಳಿಸಿತ್ತಿದ್ದು ಮುಂದಿನ ದಿನಗಳಲ್ಲಿ ಚಿಕ್ಕಮಂಗಳೂರಿನಿಂದ ಜನ ಅವರನ್ನು ಹೊರಗೆ ಹಾಕುವುದು ಖಚಿತ’ ಎಂದು ಎಚ್ಚರಿಕೆ ನೀಡಿರು.

ವಿಭಾಗೀಯ ಸಂಚಾಲಕ ರಮೇಶ್‌ರಾಜ್, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ತಾಲ್ಲೂಕು ಅಧ್ಯಕ್ಷ ವೇಣು ಯಾದವ್, ಸದಸ್ಯರಾದ ಆನಂದ, ಸುಪ್ರಿತ್, ಸುರೇಶ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)