ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೈಗಾರಿಕೆ ಆರಂಭಕ್ಕೆ ಅನುಮತಿ, ಸುರಕ್ಷತಾ ಮಾರ್ಗಸೂಚಿ ಪಾಲನೆ ಕಡ್ಡಾಯ

ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ
Last Updated 29 ಏಪ್ರಿಲ್ 2020, 13:34 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವ ಮೂಲಕ ಕೈಗಾರಿಕೆಗಳನ್ನು ಆರಂಭಿಸಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕೈಗಾರಿಕೋದ್ಯಮಿಗಳಿಗೆ ಸೂಚನೆ ನೀಡಿದರು.

ಇಲ್ಲಿ ಬುಧವಾರ ನಡೆದ ಜಿಲ್ಲೆಯ ಕೈಗಾರಿಕೆಗಳ ಒಕ್ಕೂಟ ಸದಸ್ಯರು ಹಾಗೂ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌–19 ಹಿನ್ನೆಲೆಯಲ್ಲಿ ರೂಪಿಸಿರುವ ಸ್ಟಾಂಡರ್ಡ್ ಆಪ್ ಆಪರೇಷನ್‌ (ಎಸ್‌ಒಪಿ) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೈಗಾರಿಕೆಗಳನ್ನು ನಡೆಸಬಹುದು’ ಎಂದು ತಿಳಿಸಿದರು.

‘ಕೈಗಾರಿಕೆಯ ಒಟ್ಟು ಕಾರ್ಮಿಕರಲ್ಲಿ ಶೇ 50ರಷ್ಟು ಮಂದಿಯನ್ನು ಮಾತ್ರ ಕೆಲಸಕ್ಕೆ ಕರೆಸಿಕೊಳ್ಳಬಹುದು. ಕಾರ್ಮಿಕರು ಮಾಸ್ಕ್, ಸ್ಯಾನಿಟೈಸರ್ ಮತ್ತು ಗ್ಲೌಸ್ ಕಡ್ಡಾಯವಾಗಿ ಬಳಸಬೇಕು. ಕೋಲಾರ ಜಿಲ್ಲೆಯಲ್ಲಿ ವಾಸವಿರುವ ಕಾರ್ಮಿಕರನ್ನು ಮಾತ್ರ ಕೆಲಸಕ್ಕೆ ಬಳಸಿಕೊಳ್ಳಬೇಕು. ಹೊರ ಜಿಲ್ಲೆಯ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕರೆಸಿಕೊಳ್ಳಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಹೊರ ಜಿಲ್ಲೆಯ ಕಾರ್ಮಿಕರು ಅಥವಾ ಅಧಿಕಾರಿಗಳನ್ನು ಕರೆಸಿಕೊಳ್ಳಲೇ ಬೇಕಾದ ಸಂದರ್ಭವಿದ್ದರೆ ಜಿಲ್ಲಾಧಿಕಾರಿಯ ಅನುಮತಿ ಕಡ್ಡಾಯ. ಹೊರ ಜಿಲ್ಲೆಯಿಂದ ಬಂದ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ವಾಹನ ತಪಾಸಣೆ ಮಾಡಿಸಬೇಕು. ಜತೆಗೆ ಅಂತಹ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿಟ್ಟು ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ವಾಪಸ್‌ ಕಳುಹಿಸುವಂತಿಲ್ಲ’ ಎಂದು ಹೇಳಿದರು.

ಹಸಿರು ವಲಯ: ‘ಕೋಲಾರವನ್ನು ಕೊರೊನಾ ಸೋಂಕು ಇಲ್ಲದ ಹಸಿರು ವಲಯದ ಜಿಲ್ಲೆಯೆಂದು ಸರ್ಕಾರ ಘೋಷಿಸಿದೆ. ಇದರ ಹಿಂದೆ ಎಲ್ಲರ ಸಹಕಾರವಿದೆ. ಪೊಲೀಸರು, ಅಧಿಕಾರಿಗಳು ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರ ಪರಿಶ್ರಮವಿದೆ. ಅವರ ಸೇವೆ ಗೌರವಿಸೋಣ. ಜಿಲ್ಲೆಯಲ್ಲಿ ಸೋಂಕು ನುಸುಳದಂತೆ ಎಚ್ಚರಿಕೆ ವಹಿಸೋಣ. ಸೋಂಕು ತಡೆಗೆ ಕೈಗಾರಿಕೋದ್ಯಮಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ರವಿಚಂದ್ರ, ಸಹಾಯಕ ನಿರ್ದೇಶಕ ವೆಂಕಟರಮಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT