ವರದಿ – ಕೃಷ್ಣಮೂರ್ತಿ
ಕೆಜಿಎಫ್: ದೊಡ್ಡೂರು ಕರಪನಹಳ್ಳಿಯ ನೂರಾರು ಎಕರೆ ಜಮೀನಿನಲ್ಲಿ ಪ್ಲಾಂಟೇಷನ್ ಇದ್ದರೂ, ಅದನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡದ ಕಾರಣ ದಿನೇ ದಿನೇ ಭೂ ಮಾಫಿಯಾಗಳು ನಕಲಿ ದಾಖಲೆ ಮೂಲಕ ಭೂಮಿ ಒತ್ತುವರಿ ಮಾಡಿಕೊಳ್ಳುತ್ತಿರುವ ಆತಂಕ ಎದುರಾಗಿದೆ.
ಡಿಕೆ ಹಳ್ಳಿ ಪ್ಲಾಂಟೇಷನ್ ಎಂದೇ ಹೆಸರಾಗಿರುವ ಈ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣಮೃಗಗಳಿವೆ. ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚಾಗುತ್ತಿ್ದು, ಅವು ಕಾಡು ತ್ಯಜಿಸಿ ನಾಡಿಗೆ ಬಂದು ಬೀದಿ ನಾಯಿಗಳ ಹಾವಳಿ ಅಥವಾ ವಾಹನಗಳಿಗೆ ಸಿಕ್ಕಿ ಸಾಯುತ್ತಿವೆ. ಬೆಮಲ್ ನಗರದಿಂದ ಬಡಮಾಕನಹಳ್ಳಿ ಕಾಡಿನವರೆವಿಗೂ ಕೃಷ್ಣಮೃಗಗಳಿಗೆ ಮೀಸಲು ಅರಣ್ಯ ಪ್ರದೇಶ ಘೋಷಿಸಲು ಐದು ವರ್ಷದ ಹಿಂದೆಯೇ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವವನ್ನು ಕಳಿಸಿದ್ದರೂ, ಕಂದಾಯ ಇಲಾಖೆ ಪ್ಲಾಂಟೇಷನ್ ಭಾಗವನ್ನು ಅರಣ್ಯ ಇಲಾಖೆಗೆ ಮಂಜೂರು ಮಾಡಲು ಮೀನ ಮೇಷ ಎಣಿಸುತ್ತಿದೆ. ಇದರಿಂದ ನಿಖರ ದಾಖಲೆ ಇಲ್ಲದೆ ಅರಣ್ಯ ಇಲಾಖೆ ಒತ್ತುವರಿ ತೆರವುಗೊಳಿಸಿ ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಡಿಕೆ ಹಳ್ಳಿ ಪ್ಲಾಂಟೇಷನ್ ಪಕ್ಕದಲ್ಲಿಯೇ ಬಿಜಿಎಂಎಲ್ (ಚಿನ್ನದ ಗಣಿ) ಗೆ ಸೇರಿದ ನೂರಾರು ಎಕರೆ ಜಮೀನು ಸಹ ಇದೆ. ಅದು ಕೂಡ ಇದುವರೆವಿಗೂ ಸರ್ವೆ ಆಗದ ಕಾರಣ, ಗಣಿಗೆ ಸೇರಿದ ಜಮೀನನ್ನು ಕೂಡ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿ ಕೊಳ್ಳುವ ಪರಿಪಾಠ ಹೆಚ್ಚುತ್ತಿದೆ.
ಪ್ರಾದೇಶಿಕ ಆಯುಕ್ತರು 2021ರಲ್ಲಿ ಪ್ಲಾಂಟೇಷನ್ ಸರ್ವೆ ಮಾಡಿ, ಒತ್ತುವರಿ ಗುರುತಿಸಬೇಕೆಂದು ಸೂಚಿಸಿದ್ದರು. ಆದರೆ, ಇದುವರೆವಿಗೂ ಪ್ಲಾಂಟೇಷನ್ ಸಂಪೂರ್ಣವಾಗಿ ಸರ್ವೆ ಆಗಿಲ್ಲ.
ಕೋಲಾರ ತಾಲ್ಲೂಕಿನಲ್ಲಿ 85 ಎಕರೆ ಪ್ಲಾಂಟೇಷನ್ ಅನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಮಾಲೂರು ತಾಲ್ಲೂಕಿನಲ್ಲಿ ಸುಮಾರು 1300 ಎಕರೆ ಪ್ಲಾಂಟೇಷನ್ ಇದ್ದು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿದೆ. ಆದರೆ, ಡಿಕೆ ಹಳ್ಳಿಯ ಪ್ಲಾಂಟೇಷನ್ ಮಾತ್ರ ಗೋಮಾಳವಾಗಿ ಉಳಿದಿದ್ದು, ಹೊಸ ಸರ್ವೆ ನಂಬರ್ ಸೃಷ್ಟಿಸಿ ಒತ್ತುವರಿ ಮಾಡಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಕೇಳಿ ಬಂದಿವೆ. ನಂಬರ್ ಕಾಣದ ಖರಾಬ್ ಎಂಬ ಹೆಸರಿನಲ್ಲಿ ನೂರಾರು ಎಕರೆ ಜಮೀನು ವಿಲೇ ಆಗಿದೆ. ಅವೆಲ್ಲಕ್ಕೂ ಹೊಸ ನಂಬರ್ ನೀಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುಮಾರು 1000ಕ್ಕೂ ಹೆಚ್ಚು ಎಕರೆ ಜಮೀನಿನ ಪೈಕಿ ಒಂದು ಎಕರೆ ಕೂಡ ಅರಣ್ಯ ಇಲಾಖೆಗೆ ಹಸ್ತಾಂತರವಾಗಿಲ್ಲ. ಆದರೆ, ಕಂದಾಯ ಇಲಾಖೆ ಸಾರ್ವಜನಿಕರಿಗೆ ಈ ಜಾಗವನ್ನು ಮಂಜೂರು ಮಾಡುತ್ತಿದೆ. ದರಕಾಸ್ತು ಸಾಗುವಳಿ ಹೆಸರಿನಲ್ಲಿ ಜಮೀನು ಮಂಜೂರು ಮಾಡಲಾಗುತ್ತಿದೆ. ಡಿಕೆ ಹಳ್ಳಿ ಪಂಚಾಯಿತಿ ಅಧಿಕಾರಿಗಳು ಇಂತಹ ಜಾಗದಲ್ಲಿ ಭೂ ಪರಿವರ್ತನೆ ಆಗದೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆ.
ಪ್ರಸ್ತುತ ಇದೇ ಪ್ರದೇಶದಲ್ಲಿ ಬೆಂಗಳೂರು-ಚೆನ್ನೈ ಎಕ್ಸಪ್ರೆಸ್ ಕಾರಿಡಾರ್ ಹಾದು ಹೋಗುತ್ತಿದೆ. ಹೆದ್ದಾರಿಯಿಂದ ಬೆಮಲ್ ನಗರಕ್ಕೆ ಬರಲು ದೊಡ್ಡ ರಸ್ತೆ ನಿರ್ಮಾಣವಾಗುತ್ತಿದೆ. ಆದ್ದರಿಂದ ಈ ಪ್ರದೇಶಕ್ಕೆ ಚಿನ್ನದ ಬೆಲೆ ಬಂದಿದೆ. ಸರ್ಕಾರಿ ಜಾಗ ಎಗ್ಗಿಲ್ಲದೆ ಪರರ ಪಾಲಾಗುತ್ತಿದೆ ಎಂಬುದು ಸ್ಥಳೀಯರ ದೂರಾಗಿದೆ.
ಸರ್ವೆ ನಂಬರ್ 21 ಮತ್ತು 23ರಲ್ಲಿ ಅನೇಕ ಬಡಾವಣೆಗಳು ಬಂದಿವೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾಗಿದೆ. ಕೆಡಿಎ ಆನುಮೋದನೆಯಾಗಿದೆ. ಸರ್ವೆ ನಂಬರ್ 22ರಲ್ಲಿ ಅರಣ್ಯಕ್ಕೆ ಜಾಗ ಸಿಗಬಹುದು. ಅಲ್ಲಿ ಅರಣ್ಯ ಅಭಿವೃದ್ಧಿ ಮಾಡಬಹುದುಸುರೇಶ್ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.