ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲೋತ್ಪನ್ನ ಬೆಲೆ ಹೆಚ್ಚಳ: ಕಾಂಗ್ರೆಸ್‌ ಪ್ರತಿಭಟನೆ

ಸೌದೆ ಒಲೆಯಲ್ಲಿ ಅಡುಗೆ ಮಾಡಿದ ಮಹಿಳಾ ಕಾರ್ಯಕರ್ತರು: ಕೇಂದ್ರದ ವಿರುದ್ಧ ಘೋಷಣೆ
Last Updated 14 ಮೇ 2022, 12:44 IST
ಅಕ್ಷರ ಗಾತ್ರ

ಕೋಲಾರ: ತೈಲೋತ್ಪನ್ನಗಳ ಬೆಲೆ ಏರಿಕೆ ಹಾಗೂ ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್‌ನ ಸಬ್ಸಿಡಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತರು ಇಲ್ಲಿ ಶನಿವಾರ ಪಕ್ಷದ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಬೈಕ್‌ ಮತ್ತು ಗ್ಯಾಸ್‌ ಸಿಲಿಂಡರ್‌ಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಸೌದೆ ಒಲೆಯಲ್ಲಿ ಅಡುಗೆ ಮಾಡಿದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರು ಗತಿಯಲ್ಲೇ ಸಾಗಿದೆ. ಕೇಂದ್ರವು ಕೋವಿಡ್‌ ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಕಿಡಿಕಾರಿದರು.

‘ಗೃಹ ಬಳಕೆಯ ಗ್ಯಾಸ್‌ ಸಿಲಿಂಡರ್ ಬೆಲೆ ಸಾವಿರ ರೂಪಾಯಿಯ ಗಡಿ ದಾಟಿದೆ. ಕೇಂದ್ರದ ಉಜ್ವಲ ಯೋಜನೆಯ‌‌ ಮೂಲಕ ಅಡುಗೆ ಅನಿಲದ ಸಂಪರ್ಕ ಪಡೆದಿದ್ದ ಬಡವರು, ಕೂಲಿ ಕಾರ್ಮಿಕರು ಹಾಗೂ ಮಾಧ್ಯಮ ವರ್ಗದ ಜನರು ಅಡುಗೆ ಅನಿಲದ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿರುವುದೇ ಮೋದಿ ಅವರ ಸರ್ಕಾರದ ಸಾಧನೆ’ ಎಂದು ಟೀಕಿಸಿದರು.

‘ಉಜ್ವಲ ಯೋಜನೆಯ ಮೂಲ‌ ಉದ್ದೇಶವಾದ ಹೊಗೆರಹಿತ ಅಡುಗೆ ಮನೆಯ ಕಲ್ಪನೆಯನ್ನು ಕೇಂದ್ರ ಸರ್ಕಾರ ನಾಶ ಮಾಡಿದೆ. ಅಡುಗೆ ಅನಿಲದ ಬೆಲೆಯನ್ನು ಮನಸೋಇಚ್ಛೆ ಹೆಚ್ಚಿಸುತ್ತಾ ಬಡವರಿಗೆ ಕೊಳ್ಳುವ ಶಕ್ತಿಯಿಲ್ಲದಂತೆ ಮಾಡಿದೆ. ಬಡವರು ಈ ದರದಲ್ಲಿ ಗ್ಯಾಸ್‌ ಖರೀದಿಸಿ ಅನ್ನ ಬೇಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

ಸಾರ್ವಕಾಲಿಕ ದಾಖಲೆ: ‘ಯುಪಿಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ಶೇ 9ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಶೇ 35ಕ್ಕಿಂತ ಹೆಚ್ಚು ತೆರಿಗೆ ವಿಧಿಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನ, ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ. ಜನರ ಮೇಲೆ ತೆರಿಗೆ ಹೊರೆ ಹೆಚ್ಚಿದೆ. ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಪ್ರಧಾನಿ ಮೋದಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿಲ್ಲ’ ಎಂದು ಗುಡುಗಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟಪತಪ್ಪ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೂಪಾ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಮ್ಮ, ನಗರಸಭೆ ಮಾಜಿ ಸದಸ್ಯ ಲಾಲ್ ಬಹದ್ದೂರ್ ಶಾಸ್ತ್ರಿ, ಪಕ್ಷದ ಮುಖಂಡರಾದ ಸವಿತಾ, ನಾಗೇಶ್ವರಿ, ಶಿವಕುಮಾರ್, ವಿಜಿಕುಮಾರ್, ಲಕ್ಷ್ಮೀ, ಮಂಜುಳಾ, ಪುಷ್ಪಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT