ಸಮಸ್ಯೆ ಪರಿಹಾರಕ್ಕೆ ಫೋನ್‌ಇನ್‌ ಒಳ್ಳೆಯ ಅಸ್ತ್ರ: ಜಿ.ಪಂ.ಸಿಇಒ ಜಗದೀಶ್‌

ಶುಕ್ರವಾರ, ಮೇ 24, 2019
23 °C

ಸಮಸ್ಯೆ ಪರಿಹಾರಕ್ಕೆ ಫೋನ್‌ಇನ್‌ ಒಳ್ಳೆಯ ಅಸ್ತ್ರ: ಜಿ.ಪಂ.ಸಿಇಒ ಜಗದೀಶ್‌

Published:
Updated:
Prajavani

ಕೋಲಾರ: ‘ಜನರ ಸಮಸ್ಯೆಗಳ ಪರಿಹಾರಕ್ಕೆ ಫೋನ್‌ಇನ್‌ ಕಾರ್ಯಕ್ರಮ ಒಳ್ಳೆಯ ಅಸ್ತ್ರ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್‌ ಅಭಿಪ್ರಾಯಪಟ್ಟರು.

ಇಲ್ಲಿ ಮಂಗಳವಾರ ನಡೆದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತನಾಡಿ, ‘ಕುಡಿಯುವ ನೀರು, ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಸುಮಾರು ಒಂದು ತಾಸಿನಲ್ಲಿ 23 ದೂರು ಬಂದಿವೆ’ ಎಂದು ತಿಳಿಸಿದರು.

‘ಜಿಲ್ಲೆಯ ಜನರ ಅನುಕೂಲಕ್ಕಾಗಿ ಜಿ.ಪಂ ವತಿಯಿಂದ ಪ್ರತಿ ತಿಂಗಳು ಫೋನ್‌ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ನಾನೇ ಖುದ್ದು ದೂರು ಆಲಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚು ದೂರು ಬರುತ್ತಿವೆ. ನೀರಿನ ಸಮಸ್ಯೆ ವರದಿಯಾದ 24 ತಾಸಿನಲ್ಲಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ನೀರಿನ ಸಮಸ್ಯೆ ಸಂಬಂಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕರ ಸಂಗ್ರಹಗಾರರ ಸಭೆ ನಡೆಸಿದ್ದೇನೆ. ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇನೆ’ ಎಂದು ವಿವರಿಸಿದರು.

‘ನರೇಗಾ ಕಾಮಗಾರಿಗಳ ಸಂಬಂಧ ಕೆಲ ದೂರು ಬಂದಿವೆ. ಕೆಲವು ಕಡೆ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪ ಸತ್ಯಕ್ಕೆ ದೂರವಾದದ್ದು. ಜಿಯೋ ಟ್ಯಾಪಿಂಗ್ ಮತ್ತು ಜಿಪಿಎಸ್ ಅಳವಡಿಸಿರುವುದರಿಂದ ಕಾಮಗಾರಿ ಪೂರ್ಣಗೊಳ್ಳದೆ ಬಿಲ್‌ ನೀಡುವ ಸಾಧ್ಯತೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೂಳೆತ್ತಲು ನಿರ್ಧಾರ: ‘ನರೇಗಾ ಅಡಿ ಉದ್ಯೋಗ ನೀಡಿಲ್ಲ ಎಂಬ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಒಂದೊಂದು ಕೆರೆಯ ಹೂಳು ತೆಗೆಯಲು ನಿರ್ಧರಿಸಲಾಗಿದೆ. ಕೆಲಸ ನೀಡಿಲ್ಲ ಎಂದು ದೂರು ಬಂದ 2 ದಿನದೊಳಗೆ ಪ್ರತಿಯೊಬ್ಬರೂ ಕೆರೆಯಲ್ಲಿ 1 ಮೀಟರ್‌ ಉದ್ದ, 1 ಮೀಟರ್‌ ಅಗಲ, 1 ಮೀಟರ್‌ ಆಳ ಹೂಳು ತೆಗೆದರೆ ಅವರಿಗೆ ₹ 294 ದಿನಗೂಲಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಪತಿ, ಪತ್ನಿ ಇಬ್ಬರೂ ತಲಾ ಇಷ್ಟು ಕೆಲಸ ಮಾಡಿದರೆ ದಿನಕ್ಕೆ ₹ 498 ಕೂಲಿ ನೀಡಲಾಗುವುದು. ಇಡೀ ದಿನ ಈ ಕೆಲಸ ಮಾಡಬೇಕಿಲ್ಲ. ಜನರಿಗೆ ಇಷ್ಟ ಬಂದಷ್ಟು ಕಾಲ ಈ ಕೆಲಸ ಮಾಡಬಹುದು. ರೇಷ್ಮೆ ಇಲಾಖೆಯಲ್ಲಿ ಕಡಿಮೆ ಕೆಲಸ ಮಾಡಿ ಹೆಚ್ಚು ಬಿಲ್ ನೀಡಿರುವ ಬಗ್ಗೆ ದೂರು ಬಂದಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

‘ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ನೌಕರರಿಗೆ ಸಂಬಳ ಬಂದಿಲ್ಲವೆಂದು ದೂರು ಬಂದಿದೆ. ಈ ಸಂಬಂಧ ಇಲಾಖೆ ಆಯುಕ್ತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ನೌಕರರಿಗೆ ಭರವಸೆ ನೀಡಿದ್ದೇನೆ. ರಸ್ತೆ ದುರಸ್ತಿ, ಬಸ್ ಸೌಲಭ್ಯದ ಬಗ್ಗೆ ಮನವಿ ಬಂದಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುತ್ತೇವೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !