ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ಗೆ ಭೌತಿಕ ತರಗತಿ ಆರಂಭ

ಮಕ್ಕಳ ಸುರಕ್ಷತೆ ಮುಖ್ಯ: ಡಿಡಿಪಿಐ ಕೃಷ್ಣಮೂರ್ತಿ ಸೂಚನೆ
Last Updated 29 ಜುಲೈ 2021, 15:31 IST
ಅಕ್ಷರ ಗಾತ್ರ

ಕೋಲಾರ: ‘ಪ್ರೌಢ ಶಾಲೆಗಳ ಭೌತಿಕ ತರಗತಿಗಳು ಆಗಸ್ಟ್ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, ಒಂದು ವಾರದೊಳಗೆ ಶಾಲಾ ಆವರಣ, ಕೊಠಡಿಗಳು, ಶೌಚಾಲಯ ಸ್ವಚ್ಛತೆ ಸೇರಿದಂತೆ ಕಲಿಕೆಗೆ ಪೂರಕವಾಗಿ ಆಕರ್ಷಣೀಯಗೊಳಿಸಿ’ ಎಂದು ಡಿಡಿಪಿಐ ಕೃಷ್ಣಮೂರ್ತಿ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಇಲ್ಲಿ ಗುರುವಾರ ನಡೆದ 2021–22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಶಾಲೆಗಳ ಭೌತಿಕ ತರಗತಿ ಆರಂಭಿಸುವ ನಿರೀಕ್ಷೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಸಕಲ ರೀತಿಯಲ್ಲೂ ಸಜ್ಜುಗೊಳಿಸಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕು’ ಎಂದರು.

‘ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ಶಾಲಾ ಆವರಣದಲ್ಲಿನ ಕಳೆ ಗಿಡಗಳನ್ನು ತೆರವುಗೊಳಿಸಿ. ಗಿಡ ಮರಗಳಿಗೆ ಪಾತಿ ಮಾಡಿ ಸುಂದರ ಪರಿಸರ ನಿರ್ಮಾಣ ಮಾಡಿ. ಕೊಠಡಿಗಳಲ್ಲಿನ ದೂಳು ಸ್ವಚ್ಛಗೊಳಿಸಿ. ಬ್ಲಾಕ್ ಬೋರ್ಡ್‌ಗೆ ಬಣ್ಣ ಬಳಿದು ಸುಂದರವಾಗಿಸಿ. ಕೊಠಡಿಗಳಲ್ಲಿನ ನಿರುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಿ. ಅಕ್ಷರ ದಾಸೋಹ ವಸ್ತುಗಳನ್ನು ಸ್ವಚ್ಛಂದವಾಗಿ ಸಂಗ್ರಹಿಸಿ’ ಎಂದು ತಾಕೀತು ಮಾಡಿದರು.

‘ಕುಡಿಯುವ ನೀರು, ಶೌಚಾಲಯ, ನೀರಿನ ವ್ಯವಸ್ಥೆ ಸರಿಪಡಿಸಿ. ಜಲಜೀವನ ಯೋಜನೆಯಡಿ ಕೊಳಾಯಿ ಸಂಪರ್ಕ ಮಾಡಿಸಿಕೊಳ್ಳಿ. ಹಳೆಯ ಕಲಿಕೋಪಕರಣ ತೆಗೆದು ಸ್ವಚ್ಛಗೊಳಿಸಿ. ಒಟ್ಟಾರೆ ಶಾಲೆಗಳು ಆಕರ್ಷಣೀಯವಾಗಿರುವಂತೆ ಮಾಡಿ ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿ’ ಎಂದು ಸೂಚಿಸಿದರು.

‘ದೇಶವೇ ಮೆಚ್ಚುವಂತೆ ಕೋವಿಡ್ ಆತಂಕದ ನಡುವೆ ಯಾವುದೇ ಗೊಂದಲ, ಸಮಸ್ಯೆಗೆ ಎಡೆಯಿಲ್ಲದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದೇವೆ. ಪರೀಕ್ಷೆ ಯಶಸ್ಸಿಗೆ ಇಲಾಖೆ ಸಚಿವರು, ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಪರಿಶ್ರಮ ಕಾರಣ’ ಎಂದು ಧನ್ಯವಾದ ಸಲ್ಲಿಸಿದರು.

ದಾಖಲೆ ನಿರ್ವಹಿಸಿ: ‘ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್‌ನಲ್ಲಿ ಶೇ 88ರಷ್ಟು ದಾಖಲು ಮಾಡಲಾಗಿದೆ. ಈ ಪ್ರಕ್ರಿಯೆ ಶೇ 100ರಷ್ಟು ಪೂರ್ಣಗೊಳ್ಳಬೇಕು. ಶಾಲೆಯಲ್ಲಿ ಈಗಾಗಲೇ ಬುಕ್ ಬ್ಯಾಂಕ್ ಮಾಡಲು ಸೂಚಿಸಲಾಗಿದೆ, ಅದರಂತೆ ವಿದ್ಯಾರ್ಥಿಗಳಿಂದ ಹಳೆಯ ಪುಸ್ತಕ ಸಂಗ್ರಹ ಮತ್ತು ಅದನ್ನು ಹೊಸ ವಿದ್ಯಾರ್ಥಿಗಳಿಗೆ ವಿತರಿಸುವ ಕುರಿತು ಸಮರ್ಪಕ ದಾಖಲೆ ನಿರ್ವಹಿಸಬೇಕು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸೂಚಿಸಿದರು.

‘ಶಾಲೆಯ ಸಮಗ್ರ ಮಾಹಿತಿ ಮುಖ್ಯ ಶಿಕ್ಷಕರಲ್ಲಿ ಇರಬೇಕು. ಸಂವೇದ ತರಗತಿ ಬಳಸಿಕೊಳ್ಳಿ. ಸೇತುಬಂಧ ಮಾಡಿ. ಮಕ್ಕಳ ಬಳಕೆಗೆ ಪೂರಕವಾಗಿ ಪ್ರಯೋಗಾಲಯ ಸಿದ್ಧಪಡಿಸಿ. ಹಳೆಯ, ಹಾಳಾದ ಪರಿಕರಗಳನ್ನು ಪಟ್ಟಿಮಾಡಿ ಎಸ್‌ಡಿಎಂಸಿ ಅನುಮತಿ ಪಡೆದು ವಿಲೇವಾರಿ ಮಾಡಿ’ ಎಂದು ಸೂಚನೆ ನೀಡಿದರು.

ಲಸಿಕೆ ಹಾಕಿಸಿಕೊಳ್ಳಿ: ‘ತಂಬಾಕು ಮುಕ್ತ ಶಾಲಾ ಪ್ರದೇಶವಾಗಿಸಲು ಕ್ರಮ ವಹಿಸಿ. ಕೊಠಡಿಗಳಿಗೆ ನಾಮಫಲಕ ಹಾಕಿ, ಅಟಲ್ ಟಿಂಕರಿಂಗ್ ಲ್ಯಾಬ್ ಸುಂದರಗೊಳಿಸಿ ಬಳಸಿಕೊಳ್ಳಿ. ಶಿಕ್ಷಕರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸಲಹೆ ನೀಡಿದರು.

ಮಾಲೂರು ಬಿಇಒ ಕೃಷ್ಣಮೂರ್ತಿ, ಕೋಲಾರ ಬಿಇಒ ರಾಮಕೃಷ್ಣಪ್ಪ, ಡಿವೈಪಿಸಿ ಗಂಗರಾಮಯ್ಯ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ, ಕಾರ್ಯದರ್ಶಿ ರವಿ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಬಿ.ವೆಂಕಟೇಶಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT