ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು: ಭಕ್ತರನ್ನು ಸ್ವಾಗತಿಸುವ ಕಸದ ರಾಶಿ

ಶ್ರಾವಣ ಮಾಸದಲ್ಲಿ ಚಿಕ್ಕತಿರುಪತಿಗೆ ಹರಿದು ಬರಲಿದೆ ಭಕ್ತಸಾಗರ
Published 5 ಆಗಸ್ಟ್ 2024, 6:19 IST
Last Updated 5 ಆಗಸ್ಟ್ 2024, 6:19 IST
ಅಕ್ಷರ ಗಾತ್ರ

ಮಾಲೂರು: ಶ್ರಾವಣ ಮಾಸ ಸೋಮವಾರದಿಂದ (ಆಗಸ್ಟ್‌,5) ಆರಂಭವಾಗಲಿದೆ. ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಭಕ್ತರ ಆರೋಪ.

ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇಗುಲ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಶ್ರಾವಣ ಮಾಸದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕೊರತೆ ಎದುರಾಗಿದೆ.

ತಮಿಳುನಾಡು ಸೇರಿದಂತೆ ಬೆಂಗಳೂರು ಹಾಗೂ ಚಿಕ್ಕತಿರುಪತಿ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಭೇಟಿ ಕೊಡುತ್ತಾರೆ. ದೇವಾಲಯ ಆವರಣ ಬಳಿ ಚರಂಡಿ ಸ್ವಚ್ಛತೆ ಇಲ್ಲದೆ ಗಿಡಗಂಟಿ ಬೆಳದು ಕೊಳಚೆ ನೀರು ಹರಿಯಲು ಅವಕಾಶ ಇಲ್ಲದೆ ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದೇವಾಲಯ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಕಸದ ರಾಶಿ ಭಕ್ತರನ್ನು ಸ್ವಾಗತಿಸುತ್ತದೆ.

ವೆಂಕಟೇಶ್ವರನಿಗೆ ಪ್ರಿಯವಾದ ಶ್ರಾವಣ ಮಾಸದಲ್ಲಿ ಭಕ್ತರು ಸಾಗರೋಪಾದಿಯಲ್ಲಿ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ದೇವಾಲಯ ಆವರಣದಲ್ಲಿ ಪಂಚಾಯಿತಿಯಿಂದ ನಿರ್ಮಾಣ ಮಾಡಿರುವ ಪುರುಷರ ಶೌಚಾಲಯದಲ್ಲಿ ನೀರಿನ ನಲ್ಲಿಗಳು ಹಾಳಾಗಿವೆ. ದೇವಾಲಯ ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಹರಿಕೆ ಹೊತ್ತು ಮುಡಿ ಕೊಡುವ ಭಕ್ತರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಹಣ ನೀಡಿ ಬಕೆಟ್ ಲೆಕ್ಕದಲ್ಲಿ ಖರೀದಿಸಿ ಮಕ್ಕಳಿಗೆ ಸ್ನಾನ ಮಾಡಿಸುವ ಪರಿಸ್ಥಿತಿ ಇದೆ. ವೆಂಕಟರಮಣ ದೇವಾಲಯ ಆವರಣದಲ್ಲಿರುವ ಯಾತ್ರ ನಿವಾಸ ಕಟ್ಟಡ ಪೂರ್ಣಗೊಳ್ಳದೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

₹1ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 2019–20ರಲ್ಲಿ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ದೇವಾಲಯ ಆಡಳಿತ ಮಂಡಳಿ ಕಟ್ಟಡಕ್ಕೂ ಮತ್ತು ಮಂಡಳಿಗೂ ಯಾವುದೇ ಸಂಬಂಧ ಇಲ್ಲದಂತೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಭಕ್ತರು ಆರೋಪಿಸುತ್ತಾರೆ.

ಬೆಂಗಳೂರಿನಿಂದ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇಗುಲ ದರ್ಶನಕ್ಕಾಗಿ ಬಂದಿದ್ದೇನೆ. ದೇವಾಲಯ ಆವರಣದಲ್ಲಿ ಸ್ವಚ್ಛತೆ ಇಲ್ಲ. ಭಕ್ತರಿಗೆ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲ

-ಗುರುರಾಜು, ಬೆಂಗಳೂರು ನಿವಾಸಿ

ಭಕ್ತರಿಗೆ ಮೂಲ ಸೌಕರ್ಯ ಇಲ್ಲ. ಶೌಚಾಲಯದಲ್ಲಿ ನೀರು ಬರುತ್ತಿಲ್ಲ. ಪತ್ರಿದಿನ ಭಕ್ತರಿಗೆ ನೀಡುತ್ತಿದ್ದ ಅನ್ನಪ್ರಸಾದ ನಿಲ್ಲಿಸಲಾಗಿದೆ

-ಚಂದ್ರಪ್ಪ, ಭಕ್ತ

ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ದೇವಾಲಯದಿಂದ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿಲ್ಲ

-ಸ್ವಲ್ವಮಣಿ, ದೇವಾಲಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT