ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆ ಕುಂಠಿತ

ಬುಧವಾರ, ಜೂನ್ 19, 2019
31 °C
ಸಂಸದ ಎಸ್.ಮುನಿಸ್ವಾಮಿ ವಿಷಾದ

ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆ ಕುಂಠಿತ

Published:
Updated:
Prajavani

ಕೋಲಾರ: ‘ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷತೆ ಬಿಟ್ಟು, ವ್ಯಾಪ್ತಕ ಪ್ರಚಾರ ನಡೆಸಿದಾಗ ಕಾರ್ಯಗತಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಜಿಲ್ಲಾಡಳಿತದಿಂದ ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಪರೇಷನ್ ಗ್ರೀನ್ಸ್ ಯೋಜನೆಯಡಿ ಟೊಮೆಟೊ ಸಮಗ್ರ ಅಭಿವೃದ್ಧಿ ಕಾರ್ಯಾಚರಣೆ ಕಾರ್ಯಾಗಾರದಲ್ಲಿ ಮಾತನಾಡಿ, ‘ಏಷ್ಯಾದಲ್ಲೇ ಜಿಲ್ಲೆಯಲ್ಲಿ ಟೊಮೆಟೊ ಹೆಚ್ಚು ಬೆಳೆಯಲಾಗುತ್ತಿದೆ. ಅತ್ಯವಶ್ಯಕವಾದ ಸಂಸ್ಕರಣಾ ಘಟಕ ಜಿಲ್ಲೆಯಲ್ಲಿ ಸ್ಥಾಪನೆಯಾಗುವ ಅಗತ್ಯವಿದೆ’ ಎಂದರು.

‘ರೈತರು ಲಭ್ಯವಿರುವ ಅಲ್ಪ ನೀರನ್ನೇ ಇಸ್ರೇನ್ ಮಾದರಿಯಲ್ಲಿ ಬಳಸಿಕೊಂಡು ಹಣ್ಣು, ತರಕಾರಿ ಬೆಳೆಯುತ್ತಿದ್ದಾರೆ. ಜನಪ್ರತಿನಿಧಿಗಳಾದವರು ಚುನಾವಣೆ ನಂತರ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ರೈತರ ಸಮಸ್ಯೆ ಕುರಿತಾಗಿಯೇ ಪ್ರತ್ಯೇಕವಾಗಿ ಒಂದು ದಿನಾಂಕ ನಿಗದಿಪಡಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಚರ್ಚಿಸಲು ಚಿಂತಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರ ರೈತರ ಬಗ್ಗೆ ಕಾಳಜಿ ಇಟ್ಟುಕೊಂಡು ಆಪರೇಷನ್ ಗ್ರೀನ್ಸ್ ಯೋಜನೆಯನ್ನು ರೂಪಿಸಿದೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪಿತ್ತಿಲ್ಲ. ಇಲಾಖಾಧಿಕಾರಿಗಳು ಯೋಜನೆಯ ಅನುಕೂಲದ ಕುರಿತು ಅರಿವು ಮೂಡಿಸಬೇಕು ಹಾಗೂ ವ್ಯಾಪಕ ಪ್ರಚಾರ ನೀಡಬೇಕು’ ಎಂದು ಸೂಚಿಸಿದರು.

‘ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮಾತನಾಡಿ, ‘ಟೊಮೆಟೊ ಕಾಲವರಿ ಆರಂಭವಾಗಿದ್ದು, ಎಪಿಎಂಸಿ ಜಾಗ ಸಮಸ್ಯೆಯಿದೆ. ಪ್ರಸಕ್ತ ಸಾಲಿನಲ್ಲಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಟೊಮೆಟೊ ಸಂಸ್ಕರಣಾ ವಿಚಾರದಲ್ಲಿ ಜಿಲ್ಲೆಯನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡು ಯೋಜನೆ ಅನುಷ್ಟಾನಗೊಳಿಸಬೇಕು. ಕೆಲ ರೈತರನ್ನು ಅಧ್ಯಯನಕ್ಕೆ ಕರೆದುಕೊಂಡು ಹೋಗಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸದೆ ಇರುವುದರಿಂದ ನಿರೀಕ್ಷಿತಮಟ್ಟದಲ್ಲಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

‘ಬೆಳೆ ವಿಮೆ ಮಾಡಿಸದೆ ಇರುವ ರೈತರಿಗೆ ಹೇಕ್ಟೇರ್‌ಗೆ ₹ 18 ಸಾವಿರ ಹಾಗೂ ವಿಮೆ ಮಾಡಿಸಿದವರಿಗೆ ₹ 80 ಸಾವಿರ ದೊರೆಯುತ್ತದೆ. ಪ್ರಕೃತಿ ವಿಕೋಪದಿಂದ ಅಗುವ ಅನಾಹುತಗಳನ್ನು ಯಾರು ತಡೆಯಲು ಸಾಧ್ಯವಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಬಾರದು ಎಂಬ ಉದ್ದೇಶದಿಂದಲೇ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಭಾರತ ಸರ್ಕಾರದ ಆಪರೇಷನ್ ಗ್ರೀನ್ ಯೋಜನೆ ಉತ್ತಮವಾದ ಯೋಜನೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಿ ಸಾಗಾಣೆ ಮಾಡಿ ಉತ್ತಮವಾದ ಬೆಲೆಗೆ ಮಾರಾಟ ಮಾಡಿ ಆದಾಯ ಗಳಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯ 8,707 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, 4,97,107 ಮೆಟ್ರಿಕ್ ಟೌನ್ ಉತ್ಪಾದನೆ ಮಾಡಿ ಸುಮಾರು ₹ 300 ಕೋಟಿ ವಹಿವಾಟು ನಡೆಯುತ್ತದೆ. ಎಪಿಎಂಸಿಗೆ ಹೆಚ್ಚಿನ ಜಾಗ ನೀಡಲು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ವಿಧಾನಸಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ರಾಮಚಂದ್ರ, ಸದಸ್ಯರಾದ ಅರವಿಂದ್, ಬಿ.ವಿ.ಮಹೇಶ್, ಜಯಪ್ರಕಾಶ್ ನಾಯ್ಡು, ಆಪರೇಷನ್ ಗ್ರೀನ್ ಯೋಜನೆಯ ಉಪನಿರ್ದೇಶಕ ಶ್ಯಾಮಸುಂದರ್ ಅಗರ್‍ವಾಲ್, ತೋಟಗಾರಿಕಾ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಮಂಜುನಾಥ್‌ಗೌಡ, ಡೀನ್ ಪ್ರೊ.ಬಿ.ಜಿ.ಪ್ರಕಾಶ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಬಿ.ಕೃಷ್ಣಮೂರ್ತಿ ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !