ವೃತ್ತಿ ಕೌಶಲ ತರಬೇತಿ ನೀಡಲು ಯೋಜನೆ

ಶನಿವಾರ, ಏಪ್ರಿಲ್ 20, 2019
24 °C
ಕಾಲೇಜು ವಾರ್ಷಿಕೋತ್ಸವದಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಸಚಿವ ರೆಡ್ಡಿ ಹೇಳಿಕೆ

ವೃತ್ತಿ ಕೌಶಲ ತರಬೇತಿ ನೀಡಲು ಯೋಜನೆ

Published:
Updated:
Prajavani

ಕೋಲಾರ: ‘ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಜತೆಗೆ ವೃತ್ತಿ ಕೌಶಲ ತರಬೇತಿ ನೀಡಲು ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ’ ಎಂದು ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಎಂ.ಎಸ್‌.ರೆಡ್ಡಿ ತಿಳಿಸಿದರು.

ಇಲ್ಲಿ ಬುಧವಾರ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಪೂರಕವಾದ ಕೌಶಲ ತರಬೇತಿ ನೀಡಲಾಗುವುದು’ ಎಂದರು.

‘ಶಿಕ್ಷಣ ಮುಗಿಸಿದ ನಂತರ ಕೈಗಾರಿಕೆಗಳಲ್ಲಿ ಕೆಲಸ ಮಾಡಲು ವಿ.ವಿ ವತಿಯಿಂದಲೇ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತೇವೆ. ದೇಶದಲ್ಲಿ 100 ರ‍್ಯಾಂಕಿಂಗ್‌ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ಉತ್ತರ ವಿ.ವಿ. ಸ್ಧಾನ ಪಡೆದುಕೊಂಡಿಲ್ಲ. ಮುಂದೆ ಗುಣಮಟ್ಟದ ಶಿಕ್ಷಣದ ಜತೆಗೆ ಮೂಲಸೌಕರ್ಯ ಒದಗಿಸಲಾಗುವುದು. ಐಎಎಸ್‌ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗುವುದು’ ಎಂದು ಹೇಳಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಮೊದಲಿಂದಲೂ ಜ್ಞಾನದ ಹೆಬ್ಬಾಗಿಲು ರೀತಿಯಲ್ಲಿ ಬುದ್ಧಿವಂತರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೇವೆಗೆ ಕಳುಹಿಸಿವೆ. ಉಪನ್ಯಾಸಕರು ಸರಿಯಾದ ಸಂವಹನದ ಮೂಲಕ ಪಾಠ ಪ್ರವಚನ ಮಾಡಿದರೆ ಇನ್ನಷ್ಟು ಸಾಧಕರನ್ನು ಹೊರ ತರಬಹುದು’ ಎಂದು ಅಭಿಪ್ರಾಯಪಟ್ಟರು.

ಸಾಧನೆ ಹಾದಿಯಲ್ಲಿ ಸಾಗಿ: ‘ಇತಿಹಾಸವನ್ನು 2 ರೀತಿಯಲ್ಲಿ ಓದುತ್ತೇವೆ. ಒಂದು ಸಮಾಜದಲ್ಲಿ ಅಶಾಂತಿ ತಂದವರು, ಮತ್ತೊಂದು ಸುಧಾರಣೆ ತಂದವರ ಇತಿಹಾಸ ಓದುತ್ತೇವೆ. ಯಾರ ಆದರ್ಶ ನಮ್ಮ ಕಣ್ಣ ಮುಂದೆ ಬರಬೇಕು ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾಗಾನಂದ ಕೆಂಪರಾಜ್ ಕಿವಿಮಾತು ಹೇಳಿದರು.

‘ಬುದ್ಧಿವಂತಿಕೆ ಎಲ್ಲರ ಸ್ವತ್ತಾಗಲಿ. ಕೆಲವೇ ಮಂದಿ ಪ್ರಾಮುಖ್ಯತೆ ಪಡೆದಿದ್ದಾರೆ. ಎಲ್ಲರೂ ಆತ್ಮವಿಶ್ವಾಸ, ಸತತ ಪ್ರಯತ್ನ, ಛಲದ ಗುರಿಯಿಂದ ಜ್ಞಾನದ ಪ್ರಾಮುಖ್ಯತೆ ಅರ್ಥೈಸಿಕೊಂಡು ಸಾಧನೆ ಹಾದಿಯಲ್ಲಿ ಸಾಗಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ವಿ.ವಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಕಾಲೇಜಿನ ನಾಲ್ಕು ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಚಾಲಕ ಎಂ.ಎನ್.ಮೂರ್ತಿ ಕಾಲೇಜು ವಾರ್ಷಿಕ ವರದಿ ಓದಿದರು. ಕಾಲೇಜಿನ ಶತಶೃಂಗ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಶಂಕರಪ್ಪ. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗಶೇಖರ್, ನಾಗೇಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !