ಸೋಮವಾರ, ಡಿಸೆಂಬರ್ 9, 2019
20 °C
ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಉಪ ನಿರ್ದೇಶಕಿ ಪೂರ್ಣಿಮಾ ಕಿವಿಮಾತು

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪಣ ತೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರವು ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಜನರು ಪಣ ತೊಡಬೇಕು’ ಎಂದು ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಕಿವಿಮಾತು ಹೇಳಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸ್ವಚ್ಛತೆಯೇ ಸೇವೆ–-ಪ್ಲಾಸ್ಟಿಕ್ ಘನ ತ್ಯಾಜ್ಯ ನಿರ್ವಹಣೆ ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬರು ಮನೆಯಿಂದಲೇ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆ ಇಲ್ಲದಿದ್ದರೆ ಆರೋಗ್ಯ ಹಾಳಾಗುತ್ತದೆ. ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಬಳಸಬಾರದು. ಪ್ಲಾಸ್ಟಿಕ್ ಶತಮಾನವಾದರೂ ಕರಗುವುದಿಲ್ಲ. ಮನುಷ್ಯ ಸಮುದ್ರಕ್ಕೆ ಬಾಟಲಿ, ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುತ್ತಿದ್ದು, ಸಮುದ್ರ ತೀರದಲ್ಲಿ ಅವು ರಾಶಿಯಾಗಿ ಬೀಳುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸುವುದು ಎಲ್ಲರ ಕರ್ತವ್ಯ. ಮಕ್ಕಳು ಸ್ವಚ್ಛತೆಗೆ ಹೆಚ್ಚು ಒತ್ತು ಕೊಡುವುದರ ಜತೆಗೆ ಪೋಷಕರಲ್ಲೂ ಸ್ವಚ್ಛತೆಯ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪರ್ಯಾಯ ಬ್ಯಾಗ್‌ ಬಳಸಬೇಕು’ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸದಸ್ಯೆ ಅರುಣಾ ಕಿವಿಮಾತು ಹೇಳಿದರು.

ಪ್ಲಾಸ್ಟಿಕ್ ನಿಷೇಧ: ‘2016ರಲ್ಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ತಾಲ್ಲೂಕಿನಲ್ಲಿ 325 ಚೀಲ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ದೇಶದಲ್ಲಿ ಪ್ರತಿ ವ್ಯಕ್ತಿ 4 ಕೆಜಿ ಪ್ಲಾಸ್ಟಿಕ್ ಬಳಸುತ್ತಿದ್ದಾನೆ’ ಎಂದು ಮುಳಬಾಗಿಲು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ವಿವರಿಸಿದರು.

‘ಸ್ವಚ್ಛತೆ ಕಾಪಾಡಲು ಕಾನೂನು ತರಬೇಕಿಲ್ಲ. ಜನ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆ ಇಲ್ಲದಿದ್ದರೆ ಸೊಳ್ಳೆಗಳು ಹೆಚ್ಚಿ ಡೆಂಗಿ, ಚಿಕೂನ್‌ ಗುನ್ಯಾದಂತಹ ಸಾಂಕ್ರಾಮಿಕ ಕಾಯಿಲೆ ಬರುತ್ತವೆ. ಮನೆಗಳಲ್ಲಿ ಸೊಳ್ಳೆ ಪರದೆ ಬಳಸಬೇಕು ಹಾಗೂ ಬೇವಿನ ಸೊಪ್ಪಿನ ಹೊಗೆ ಹಾಕಬೇಕು’ ಎಂದು ಮುಳಬಾಗಿಲು ತಾಲ್ಲೂಕು ಆರೋಗ್ಯಾಧಿಕಾರಿ ಕೆ.ಎಂ.ವರ್ಣಶ್ರೀ ಸಲಹೆ ನೀಡಿದರು.

ಕಸ ವಿಂಗಡಿಸಿ: ‘ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಜಾರಿಗೆ ತಂದು ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದೆ. ಆದರೆ, ಬಹುತೇಕರು ಶೌಚಾಲಯ ಬಳಸದೆ ಬಯಲಿನಲ್ಲೇ ಶೌಚಕ್ಕೆ ಹೋಗುತ್ತಿರುವುದು ಶೋಚನೀಯ. ಕರ್ನಾಟಕ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುತ್ತಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ಕೆ.ಎನ್.ರಮೇಶ್ ಮನವಿ ಮಾಡಿದರು.

ಕುರುಡುಮಲೆ ಗ್ರಾ.ಪಂ ಅಧ್ಯಕ್ಷೆ ರಾಮಕ್ಕ, ಸ್ವಚ್ಛ ಭಾರತ ಮಿಷನ್‌ ಸಂಯೋಜನಾಧಿಕಾರಿ ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಭಾವತಿ, ಕುರುಡುಮಲೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎ.ಆರ್.ರೂಪಾ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)