ಅಪರಾಧ ತಡೆಗೆ ಸಾರ್ವಜನಿಕರು ಸಹಕರಿಸಿ: ಎಎಸ್ಪಿ ರಾಜೇಂದ್ರಕುಮಾರ್‌ ಮನವಿ

7
ಗ್ರಾಮ ಗಸ್ತು ಸದಸ್ಯರ ಸಭೆ

ಅಪರಾಧ ತಡೆಗೆ ಸಾರ್ವಜನಿಕರು ಸಹಕರಿಸಿ: ಎಎಸ್ಪಿ ರಾಜೇಂದ್ರಕುಮಾರ್‌ ಮನವಿ

Published:
Updated:
Deccan Herald

ಕೋಲಾರ: ‘ಅಪರಾಧ ಚಟುವಟಿಕೆಗಳ ತಡೆಗೆ ಮತ್ತು ಪ್ರಕರಣಗಳ ಪತ್ತೆಗೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಬಿ.ರಾಜೇಂದ್ರಕುಮಾರ್ ಮನವಿ ಮಾಡಿದರು.

ಪೊಲೀಸ್ ಇಲಾಖೆಯು ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 105 ಗ್ರಾಮಗಳ ಗ್ರಾಮ ಗಸ್ತು ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಅಪರಾಧ ಚಟುವಟಿಕೆ ನಿಯಂತ್ರಿಸುವುದು ಪೊಲೀಸರ ಹೊಣೆಯಾಗಿದ್ದರೂ, ಏಕಕಾಲಕ್ಕೆ ಎಲ್ಲಾ ಕಡೆ ಗಸ್ತು ನಡೆಸುವುದು ಸಾಧ್ಯವಿಲ್ಲ. ಸುತ್ತಮುತ್ತ ಅಪರಾಧ ಕೃತ್ಯ ಕಂಡುಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.

‘ಸಿವಿಲ್ ಹಾಗೂ ಜಮೀನು ವ್ಯಾಜ್ಯಗಳನ್ನು ನ್ಯಾಯಾಲಯದಲ್ಲಿ ಅಥವಾ ಕಂದಾಯ ಇಲಾಖೆಯಲ್ಲಿ ಪರಿಹರಿಸಿಕೊಳ್ಳಬೇಕು. ಕಾನೂನುಬಾಹಿರ ಚಟುವಟಿಕೆಗಳು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

‘ಗಸ್ತು ಸಿಬ್ಬಂದಿ ಸಾರ್ವಜನಿಕರ ದೂರಿಗೆ ಸ್ಪಂದಿಸದಿದ್ದಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು. ದೂರು ಕೊಟ್ಟವರ ವಿವರವನ್ನು ಗೋಪ್ಯವಾಗಿ ಇಡುತ್ತೇವೆ. ಗಸ್ತು ಸಿಬ್ಬಂದಿಯೊಂದಿಗೆ ಆಯಾ ಗ್ರಾಮಗಳ ಎಲ್ಲಾ ಜನಾಂಗದವರನ್ನು ಸದಸ್ಯರಾಗಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಾಹಿತಿ ನೀಡಿ: ‘ಗ್ರಾಮದಲ್ಲಿನ ಕುಂದು ಕೊರತೆಗಳು ಹಾಗೂ ತೊಂದರೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿ. ಹೊಸ ಗಸ್ತು ವ್ಯವಸ್ಥೆ ಕುರಿತು ಸಾರ್ವಜನಿಕರ ತಿಳಿವಳಿಕೆ ಮೂಡಿಸಿ’ ಎಂದು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಎಸ್.ಆರ್.ಜಗದೀಶ್ ಸಿಬ್ಬಂದಿಗೆ ಸೂಚಿಸಿದರು.

‘ಗಸ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ, ಇತ್ತೀಚಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ’ ಎಂದು ಬೀಚಗೊಂಡಹಳ್ಳಿ ಗ್ರಾಮಸ್ಥ ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ಣಾಯಕ: ‘ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ನಿರ್ಣಾಯಕ. ಈ ಕಾರಣಕ್ಕಾಗಿಯೇ ಗ್ರಾಮ ಗಸ್ತು ಸದಸ್ಯರನ್ನು ನೇಮಿಸಲಾಗುತ್ತಿದೆ’ ಎಂದು ಗ್ರಾಮಾಂತರ ಠಾಣೆ ಎಸ್‍ಐ ಆರ್.ಕೇಶವಮೂರ್ತಿ ವಿವರಿಸಿದರು.

‘ವೇಮಗಲ್ ಭಾಗದಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೇಬಲ್ ಕಳವು ಪ್ರಕರಣಗಳು ಹೆಚ್ಚಿದ್ದು, ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಜತೆಗೆ ದೇವಾಲಯಗಳಲ್ಲಿ ಕಳವು, ಕುರಿ ಮತ್ತು ಮೇಕೆ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಈ ಕಳವು ಪ್ರಕರಣಗಳ ತಡೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಮುನಿಯಪ್ಪ ಮನವಿ ಮಾಡಿದರು.

ಗ್ರಾಮೀಣ ಭಾಗದ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ರಾಜೇಂದ್ರಕುಮಾರ್‌ ಗ್ರಾಮ ಗಸ್ತು ಸಮಿತಿ ಸದಸ್ಯರಿಂದ ಮಾಹಿತಿ ಪಡೆದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !