ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಪೋಲಿಯೊ ಲಸಿಕೆ ಅಭಿಯಾನ

ಆರೋಗ್ಯವಂತ ಸಮಾಜ ನಿರ್ಮಿಸಿ: ಜಿಲ್ಲಾಧಿಕಾರಿ ಸತ್ಯಭಾಮ ಮನವಿ
Last Updated 7 ಜನವರಿ 2021, 15:37 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಜ.17ರಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭವಾಗಲಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಪೋಲಿಯೊ ಲಸಿಕೆ ಅಭಿಯಾನದ ಸಂಬಂಧ ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಪೋಷಕರು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಮನವಿ ಮಾಡಿದರು.

‘ದೇಶದಲ್ಲಿ 2011ರ ನಂತರ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ವಿಶ್ವಸಂಸ್ಥೆಯು 2014ರಲ್ಲೇ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿ ಘೋಷಿಸಿದೆ. ಮಕ್ಕಳಲ್ಲಿ ಯಾವುದೇ ನ್ಯೂನತೆ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವರ್ಷ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಅಭಿಯಾನ ಯಶಸ್ವಿಗೊಳಿಸಲು ಆರೋಗ್ಯ ಇಲಾಖೆ ಜತೆಗೆ ಇತರೆ ಇಲಾಖೆ ಸಿಬ್ಬಂದಿಯು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬಾಲ್ಯಾವಸ್ಥೆಯಲ್ಲಿ ಯಾವುದೇ ದೈಹಿಕ ನ್ಯೂನತೆ ಬಾರದಂತೆ ತಡೆಯಲು ಸರ್ಕಾರ ಉಚಿತವಾಗಿ ಈ ಅಭಿಯಾನ ನಡೆಸುತ್ತಿದೆ’ ಎಂದು ಮಾಹಿತಿ ನೀಡಿದರು.

ತಂಡ ರಚನೆ: ‘ಜಿಲ್ಲೆಯಲ್ಲಿ 1,57,125 ಮಕ್ಕಳು 5 ವರ್ಷದೊಳಗಿನವರಾಗಿದ್ದಾರೆ. ಇವರಿಗೆ ಪೋಲಿಯೊ ಲಸಿಕೆ ನೀಡಲು ತಂಡಗಳನ್ನು ರಚಿಸಲಾಗಿದೆ. ಒಟ್ಟಾರೆ 4 ದಿನ ಅಭಿಯಾನ ನಡೆಯಲಿದೆ. ಲಸಿಕೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತದೆ. ಜತೆಗೆ ಕರಪತ್ರ ಹಂಚಿ ಪ್ರಚಾರ ನಡೆಸಲಾಗುವುದು’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ವಿವರಿಸಿದರು.

‘ಅಭಿಯಾನದ ಮೊದಲ ದಿನ ಜ.17ರಂದು ಬೂತ್‌ಗಳಲ್ಲಿ ಪೋಲಿಯೊ ಲಸಿಕೆ ಹಾಕಲಾಗುತ್ತದೆ. 2ನೇ ಮತ್ತು 3ನೇ ದಿನದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುವುದು. 4ನೇ ದಿನ ನಗರ ಪ್ರದೇಶದಲ್ಲಿ ಲಸಿಕೆ ಚಟುವಟಿಕೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ವದಂತಿಗೆ ಕಿವಿಗೊಡಬೇಡಿ: ‘ದೇಶವು ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ ಲಸಿಕೆ ಅಭಿಯಾನ ಮುಂದುವರಿಸಲಾಗಿದೆ. ಪೋಷಕರು ಯಾವುದೇ ವದಂತಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌ ಕಿವಿಮಾತು ಹೇಳಿದರು.

‘ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು. ಸಾರ್ವಜನಿಕರು ಅಭಿಯಾನದ ಸದುಪಯೋಗ ಪಡೆಯಬೇಕು. ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಪೋಲಿಯೊ ಬರುವುದನ್ನು ತಪ್ಪಿಸಬೇಕು’ ಎಂದು ಕೋರಿದರು.

ವಿಶ್ವ ಆರೋಗ್ಯ ಸಂಸ್ಥೆ ನೋಡಲ್ ಅಧಿಕಾರಿ ಮಿಸ್ಬಾ ಅಲಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪಾಲಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT