ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರಿಂದ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ

ತರಬೇತಿ ಶಿಬಿರದಲ್ಲಿ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ಕಳವಳ
Last Updated 20 ಫೆಬ್ರುವರಿ 2019, 11:56 IST
ಅಕ್ಷರ ಗಾತ್ರ

ಕೋಲಾರ: ‘ಯುವಕರು ಚುನಾವಣೆ ಸಮಯದಲ್ಲಿ ಅಮಿಷಗಳಿಗೆ ಒಳಗಾಗಿರುವುದರಿಂಲೇ ದೇಶದಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ನೆಹರು ಯುವ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಹಣ ಪಡೆದು ಮತಹಾಕಿದವರು ಪ್ರಶ್ನಿಸುವ ಹಕ್ಕು ಕಳೆದುಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಇಂದು ಸಮಾಜದ ಅವ್ಯವಸ್ಥೆಗೆ ಕಾರಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಎಲ್ಲಿಯವರೆಗೂ ಅವ್ಯವಸ್ಥೆ ಇರುತ್ತದೊ ಅಲ್ಲಿಯತನಕ ಸಮಾಜ ಸುಧಾರಣೆಯಾಗುವುದು ಕಷ್ಟ. ಅವ್ಯವಸ್ಥೆಯನ್ನು ಬದಲಾಯಿಸಲು ಯುವಕರು ಅಂದೋಲನದ ರೀತಿ ಮುಂದಾಗಬೇಕು. ಈ ಕುರಿತು ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕೀರಣಗಳು ನಡೆಯಬೇಕಾದ ಅಗತ್ಯವಿದೆ’ ಎಂದರು.

‘ಗೌತಮ ಬುದ್ದ, ಬಸವಣ್ಣ, ಅಂಬೇಡ್ಕರ್ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗುತ್ತದೆ. ಈ ಮಹಾನ್ ವ್ಯಕ್ತಿಗಳು ಶಾಂತಿ ಅಭಿವೃದ್ದಿಯ ಸಂಕೇತ. ಅನುಭವ ಮಂಟಪದಲ್ಲಿ ಬಸವಣ್ಣ ಸಮಾಜದಲ್ಲಿ ಸಮಾನತೆ, ಜಾತೀಯತೆಗಳಿಗೆ ಪ್ರೇರಕರಾಗಿ ಹೊಸ ಕ್ರಾಂತಿಯನ್ನೆ ಸೃಷ್ಟಿ ಮಾಡಿದ್ದರು’ ಎಂದು ಹೇಳಿದರು.

‘ಸಮಾಜದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತಿರುವ ಘಟನೆಗಳನ್ನು ನಿಯಂತ್ರಿಸಲು ಯುವಕರು ಮುಂದಾಗಬೇಕು’ ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಬಹಳ ಮುಂದುವರೆದಿದೆ. ಅದನ್ನು ಅಗತ್ಯಕ್ಕೆ ಮೀರಿ ಉಪಯೋಗಿಸುತ್ತಿದ್ದು ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ. ಇದರಿಂದ ಪೋಷಕರು ಇದರ ಕಡೆ ಹೆಚ್ಚು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ತಾಪಮಾನ ಏರುಪೇರಾಗಲು ಪರಿಸರದ ಅಸಮಾತೋಲನವೇ ಕಾರಣವಾಗಿದೆ. ಕೈಯಿಂದ ದುಡ್ಡು ಖರ್ಚು ಮಾಡಿ ಸಮುದಾಯ ಅಭಿವೃದ್ಧಿ, ರಕ್ಷಣೆಯಲ್ಲಿ ಭಾಗಿ ಎಂದು ಹೇಳುತ್ತಿಲ್ಲ. ಇದಕ್ಕೆಲ್ಲಾ ಸರ್ಕಾರ, ಸರ್ಕಾರಿ ಇಲಾಖೆಗಳ ಮೂಲಕ ಅಗತ್ಯವಿರುವ ಸಂಪನ್ಮೂಲ ಕಲ್ಪಿಸಲಾಗುತ್ತದೆ. ಯುವಕರು ಬಿಡುವಿನ ಸಮಯದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಪರಿಸರ ನಿಯಂತ್ರಣಾಧಿಕಾರಿ ಸಿ.ಆರ್.ಮಂಜುನಾಥ್ ಮಾತನಾಡಿ, ‘ಯುವಕರು ಸಮಾಜದ ಆದಾರಸ್ಥಂಭ ಇದ್ದಂತೆ. ಗುರಿ ಸಾಧನೆಗೆ ಎದುರಾಗುವ ಅಡ್ಡಿಯನ್ನು ಆತ್ಮಸ್ಥೈರ್ಯದಿಂದ ಎದುರಿಸುವಂತಾಗಬೇಕು’ ಎಂದು ಹೇಳಿದರು.

‘ತಂದೆ ತಾಯಿ, ಗುರುಗಳಿಗೆ ಗೌರವ ನೀಡದವರು ಜೀವನ ಗುರಿ ಸಾಧನೆ ಮಾಡುವುದು ಅಸಾಧ್ಯ. ಈ ಕಾಲದಲ್ಲಿ ತಂದೆ ತಾಯಿ ಇರುವವರು ಪುಣ್ಯವಂತರು. ಅವರ ಪೋಷಣೆ ಸೇವೆ ಮಾಡುವುದು ಒಂದು ಸೌಭಾಗ್ಯವಾಗಿದೆ’ ಎಂದರು.

‘ತಂದೆ ತಾಯಿಯರಿಗೆ ತೋರದ ಪ್ರೀತಿ ಪರಿಸರದ ಮೇಲೆ ತೋರಲು ಸಾಧ್ಯವೇ. ಬೆಳೆಸಿದವರನ್ನು ಗೌರವಿಸುವ ಮೂಲಕ ನಿಮ್ಮ ಜೀವನದ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ರಾಜ್ಯದಲ್ಲಿ ಶೇ.33ರಷ್ಟು ಇರಬೇಕಾದ ಹಸಿರೀಕರಣ ಶೇ.22ರಷ್ಟು ಇದೆ. ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರದ ಸಮತೋಲ ಕಾಪಾಡಬೇಕಾದ ಜವಾಬ್ದಾರಿ ಯುವಕರ ಮೇಲಿದೆ’ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಗೀತಾ, ನಿವೃತ್ತ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಜಿ.ಇ.ನಾರಾಯಣಗೌಡ, ಭಾರತ್ ಸ್ಕೌಸ್ಟ್ ಮತ್ತು ಗೈಡ್ಸ್ ಸಂಸ್ಥೆಯ ಸಹಾಯಕ ಆಯುಕ್ತ ಸುರೇಶ್, ಸಂಘಟನಾ ಆಯುಕ್ತ ವಿ.ಬಾಬು, ಸ್ವಚ್ಛ ಭಾರತ್ ಪ್ರಶಸ್ತಿ ಪುರಸ್ಕೃತ ಪ್ರವೀಣ್ ಕುಮಾರ್, ಕಲಾವಿ ಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT