ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ವಿರುದ್ಧ ರಾಜಕೀಯ ಅಸ್ತ್ರ

ಸಹಕಾರ ಸಪ್ತಾಹದಲ್ಲಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಳವಳ
Last Updated 19 ನವೆಂಬರ್ 2020, 13:31 IST
ಅಕ್ಷರ ಗಾತ್ರ

ಕೋಲಾರ: ‘ನಷ್ಟದ ಪ್ರಪಾತಕ್ಕೆ ಬಿದ್ದಿದ್ದ ಬ್ಯಾಂಕನ್ನು ಮೇಲೆತ್ತಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಆದರೂ ಬ್ಯಾಂಕ್‌ ವಿರುದ್ಧ ರಾಜಕೀಯ ಅಸ್ತ್ರ ಬಳಸುತ್ತಲೇ ಇದ್ದಾರೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕಳವಳ ವ್ಯಕ್ತಪಡಿಸಿದರು.

ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್ ಮತ್ತು ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು’ ವಿಚಾರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಹಕಾರ ವ್ಯವಸ್ಥೆ ರಾಜಕೀಯದಿಂದ ದೂರವಿರಲಿ ಎಂಬ ಘೋಷಣೆ ಭಾಷಣಕ್ಕೆ ಸೀಮಿತವಾಗಿದೆ. ರಾಜಕೀಯದಿಂದ ದೂರವಿದ್ದು ಸಹಕಾರ ಸಂಸ್ಥೆ ನಡೆಸುವುದು ಅಸಾಧ್ಯ. ಆದರೆ, ಮಹಿಳೆಯರು ಹಾಗೂ ರೈತರು ಸಿಡಿದೆದ್ದು ಸಹಕಾರ ವ್ಯವಸ್ಥೆ ಉಳಿಸಿಕೊಳ್ಳುವ ಸಂಕಲ್ಪ ಮಾಡಿದರೆ ಮಾತ್ರ ಬದಲಾವಣೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

‘ಭಾಷಣದಲ್ಲಿ ಎಂ.ವಿ.ಕೃಷ್ಣಪ್ಪ, ನಾಗಿರೆಡ್ಡಿ, ಬೈರೈಗೌಡ, ಪಿ.ವೆಂಕಟಗಿರಿಯಪ್ಪ ಅವರ ಹೆಸರು ಹೇಳುತ್ತಲೇ ನಾವಿಂದು ಸಹಕಾರ ವ್ಯವಸ್ಥೆಯನ್ನು ರಾಜಕೀಯದಲ್ಲಿ ಬೆರೆಸಿದ್ದೇವೆ. ಈ ಪರಿಸ್ಥಿತಿ ಬದಲಾವಣೆ ಆಗಬೇಕು. ಇಲ್ಲವಾದರೆ ಸಹಕಾರ ವ್ಯವಸ್ಥೆಯ ಬಲವರ್ಧನೆ ಅಸಾಧ್ಯ’ ಎಂದು ಹೇಳಿದರು.

ಅವಕಾಶ ಕಲ್ಪಿಸಬೇಕು: ‘ಪ್ರಾಥಮಿಕ ಹಂತದ ಸಹಕಾರ ಸಂಘಗಳಲ್ಲೇ ದುರ್ಬಲರು, ಪರಿಶಿಷ್ಟರು, ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಸದಸ್ಯತ್ವ ನೀಡುವಾಗ ರಾಜಕೀಯ ಪಕ್ಷ, ಜಾತಿ ಹೊರಗಿಟ್ಟು ನೀಡಬೇಕು. ಆಗ ಮಾತ್ರ ಸಹಕಾರ ವ್ಯವಸ್ಥೆಗೆ ಅರ್ಥ ಬರುತ್ತದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ಸಲಹೆ ನೀಡಿದರು.

‘ಸಮಾಜದ ಕಟ್ಟಕಡೆಯ ಜನರಿಗೂ ಸಹಕಾರ ವ್ಯವಸ್ಥೆಯ ಪ್ರಯೋಜನ ಸಿಗಬೇಕು. ಪ್ರತಿ ಕುಟುಂಬದಿಂದ ಒಬ್ಬರು ಸಹಕಾರ ವ್ಯವಸ್ಥೆಯ ಸದಸ್ಯನಾಗಬೇಕು. ಆಗ ಮಾತ್ರ ಸಹಕಾರ ವ್ಯವಸ್ಥೆ ಸದೃಢಗೊಳ್ಳುತ್ತದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಹೇಳಿದರು.

ಆತ್ಮಾವಲೋಕನ: ‘ಶೇ 20ರಷ್ಟು ಮಂದಿಯೂ ಸಹಕಾರ ರಂಗದಲ್ಲಿ ತೊಡಗಿಕೊಂಡಿಲ್ಲ. ಈ ಬಗ್ಗೆ ಆತ್ಮಾವಲೋಕನ ಅಗತ್ಯ. ಸಹಕಾರಿಗಳ ಮನ ಪರಿವರ್ತನೆಯಾಗಬೇಕು. ಸಹಕಾರ ಸಂಸ್ಥೆಗಳಲ್ಲಿ ಯುವಕರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ದುರ್ಬಲರಿಗೆ ಸ್ಥಾನ ಮೀಸಲಿಟ್ಟರೆ ಮಾತ್ರ ಸಹಕಾರ ಕ್ಷೇತ್ರದಲ್ಲಿ ಸಮಾಜದ ಕಟ್ಟಕಡೆಯ ಕುಟುಂಬ ಸದಸ್ಯತ್ವ ಹೊಂದಲು ಸಾಧ್ಯ’ ಎಂದು ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.

‘ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಸಹಕಾರ ರಂಗ ಬೆಳೆಸುವ ಚಿಂತನೆ ಮಾಡಬೇಕು. ನದಿ ಮೂಲ ಹೊಂದಿರುವ ಮಂಡ್ಯದಲ್ಲಿ 1,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ, ನದಿಯೂ ಇಲ್ಲದ ಕೋಲಾರ ಜಿಲ್ಲೆಯ ಜನ ಆತ್ಮಹತ್ಯೆಯಿಂದ ದೂರವಾಗಲು ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್‌ ಕಾರಣ’ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್ ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ರುದ್ರಸ್ವಾಮಿ, ರಮೇಶ್, ಸುರೇಶ್, ಟಿ.ಕೆ.ಬೈರೇಗೌಡ, ಪಿ.ಎಂ.ವೆಂಕಟೇಶ್, ಸಿಇಒ ಕೆ.ಎಂ.ಭಾರತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಆರ್.ಶಶಿಧರ್, ಸಹಕಾರ ಸಂಘಗಳ ಉಪ ನಿಬಂಧಕ ಸಿದ್ದನಗೌಡ ಎನ್.ನೀಲಪ್ಪನವರ್, ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕಿ ಜಿ.ಬಿ.ಶಾಂತಕುಮಾರಿ, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಅಂಬಿಕಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT