ಕಾಂಗ್ರೆಸ್‌ ಅತೃಪ್ತರಿಂದ ರಾಜಕೀಯ ಕಲುಷಿತ

ಶುಕ್ರವಾರ, ಏಪ್ರಿಲ್ 19, 2019
27 °C
ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವಾರೆಡ್ಡಿ ವಾಗ್ದಾಳಿ

ಕಾಂಗ್ರೆಸ್‌ ಅತೃಪ್ತರಿಂದ ರಾಜಕೀಯ ಕಲುಷಿತ

Published:
Updated:
Prajavani

ಕೋಲಾರ: ‘ಕಾಂಗ್ರೆಸ್ ಪಕ್ಷದಲ್ಲಿನ ಅತೃಪ್ತ ನಾಯಕರು ತಮ್ಮ ಆಪ್ತರಿಗೆ ಬಿಜೆಪಿಯ ಟಿಕೆಟ್‌ ಕೊಡಿಸಿ ಹಿಂಬಾಗಿಲ ರಾಜಕಾರಣ ಮಾಡುವ ಮೂಲಕ ಜಿಲ್ಲೆಯ ರಾಜಕೀಯ ಕಲುಷಿತಗೊಳಿಸುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಗುರುವಾರ ಮತ ಯಾಚಿಸಿ ಮಾತನಾಡಿ, ‘ಜೆಡಿಎಸ್‌ ಕಾರ್ಯಕರ್ತರು ಹೈಕಮಾಂಡ್ ಸೂಚನೆಯಂತೆ ಕಡ್ಡಾಯವಾಗಿ ಮೈತ್ರಿ ಧರ್ಮ ಪಾಲನೆ ಮಾಡಲೇಬೇಕು’ ಎಂದು ಹೇಳಿದರು.

‘ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಜಿಲ್ಲೆಯ ರಾಜಕಾರಣವನ್ನು ಹಾಳು ಮಾಡಿದ್ದಾರೆ. ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರನ್ನು ಮುಂದೆ ಛೂಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪರ ವಿರುದ್ಧ ಕೆಲಸ ಮಾಡಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲು ಕ್ಷೇತ್ರದಲ್ಲಿ ಮುನಿಯಪ್ಪರನ್ನು ಗೆಲ್ಲಿಸುವ ಜವಾಬ್ದಾರಿ ಎರಡೂ ಪಕ್ಷಗಳ ಕಾರ್ಯಕರ್ತರ ಮೇಲಿದೆ’ ಎಂದರು.

‘ದೇಶದಲ್ಲಿ ಯಾವುದೇ ಕಾರಣಕ್ಕೂ ಕೋಮು ಶಕ್ತಿಗಳು ಅಧಿಕಾರಕ್ಕೆ ಬರಬಾರದು. ಅವರಿಗೆ ಅಧಿಕಾರ ಕೊಟ್ಟರೆ ಇಡೀ ದೇಶವನ್ನೇ ನುಂಗುತ್ತಾರೆ. ತಾನು ದೇವರಾಜು ಅರಸು ನಾಯಕತ್ವದಲ್ಲಿ ರಾಜಕೀಯ ಪ್ರವೇಶಿಸಿ ಇದೀಗ ಸಿದ್ದರಾಮಯ್ಯರ ಜತೆಯಲ್ಲಿ ಬೆಳೆದಿದ್ದೇನೆ ಎಂದು ಹೇಳುವ ರಮೇಶ್‌ಕುಮಾರ್‌ ಕೋಮುವಾದಿ ಬಿಜೆಪಿಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಆ ಮೂಲಕ ಅರಸು ಮತ್ತು ಸಿದ್ದರಾಮಯ್ಯರ ತತ್ವ ಸಿದ್ಧಾಂತ ಗಾಳಿಗೆ ತೋರಿದ್ದಾರೆ’ ಎಂದು ಟೀಕಿಸಿದರು.

ಕಪಟ ನಾಟಕ: ‘ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪ ಶ್ರೀನಿವಾಸಪುರಕ್ಕೆ ಭೇಟಿ ನೀಡಿದ್ದಾರೆ ಕಾಂಗ್ರೆಸ್ ನಾಯಕರು ಎಸ್.ಮುನಿಸ್ವಾಮಿ ಪರ ಬಹಿರಂಗ ಪ್ರಚಾರ ನಡೆಸಿದ್ದಾರೆ. ರಮೇಶ್‌ಕುಮಾರ್ ತಮ್ಮ ಅಭ್ಯರ್ಥಿಪರ ಕೆಲಸ ಮಾಡುತ್ತಿದ್ದು, ಇಲ್ಲಿ ಅವರೇ ಬಿಜೆಪಿ ಶಕ್ತಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ರಮೇಶ್‌ಕುಮಾರ್‌ರ ಕಪಟ ನಾಟಕಕ್ಕೆ ಇದಕ್ಕಿಂತ ಬೇರೆ ಏನು ಸಾಕ್ಷಿ ಬೇಕು?’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರು ಭಿನ್ನಾಭಿಪ್ರಾಯ ಸರಿಪಡಿಸುತ್ತಾರೆ. ಕಾರ್ಯಕರ್ತರು ವಿರೋಧಿಗಳ ಮಾತಿಗೆ ಮರುಳಾಗಬಾರದು’ ಎಂದು ಸಲಹೆ ನೀಡಿದರು.

ಬಿಜೆಪಿ ನೆಲಕಚ್ಚಿದೆ: ‘ಪ್ರಧಾನಿ ನರೇಂದ್ರ ಮೋದಿಯ ದುರಾಡಳಿತದಿಂದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 30 ದಿನಕ್ಕೆ ₹ 45 ಸಾವಿರ ಕೋಟಿ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಮೋದಿ 5 ವರ್ಷದಲ್ಲಿ ನಯಾ ಪೈಸೆ ಕೃಷಿ ಸಾಲ ಮನ್ನಾ ಮಾಡಲಿಲ್ಲ’ ಎಂದು ಕುಟುಕಿದರು.

‘ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ. ಮುನಿಯಪ್ಪರ ಮೇಲೆ ಒತ್ತಡ ಹಾಕಿ ಗ್ರಾಮಗಳಲ್ಲಿ ಆಗಬೇಕಿರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಮುನಿಸ್ವಾಮಿ ಜಿಲ್ಲೆಯವರಲ್ಲ: ‘ಮುನಿಯಪ್ಪ ಅವರನ್ನು ಗೆಲ್ಲಿಸಲು ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಪ್ಪ ಕಿವಿಮಾತು ಹೇಳಿದರು.

‘ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಜಿಲ್ಲೆಯವರಲ್ಲ. ಎಂದೋ ಊರು ಬಿಟ್ಟು ಹೋಗಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿ ಮಾಲೂರಿನವರು ಎಂದು ಜನರನ್ನು ಯಾಮಾರಿಸುತ್ತಿದ್ದಾರೆ. ಜನ ಇದಕ್ಕೆಲ್ಲಾ ಕಿವಿಗೊಡಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !