ರಾಜಕೀಯ ಚುನಾವಣೆಗೆ ಸೀಮಿತವಾಗಲಿ

ಮಂಗಳವಾರ, ಮಾರ್ಚ್ 19, 2019
26 °C
ಕಾಜಿಕಲ್ಲಹಳ್ಳಿಯಲ್ಲಿ ಶಾಸಕ ಶ್ರೀನಿವಾಸಗೌಡ ಸಲಹೆ

ರಾಜಕೀಯ ಚುನಾವಣೆಗೆ ಸೀಮಿತವಾಗಲಿ

Published:
Updated:
Prajavani

ಕೋಲಾರ: ‘ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ರಾಜಕೀಯ ಚುನಾವಣೆಗಷ್ಟೇ ಸೀಮಿತವಾಗಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ತಾಲ್ಲೂಕಿನ ಕಾಜಿಕಲ್ಲಹಳ್ಳಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ (ಎಸ್‌ಸಿಪಿ–ಟಿಎಸ್‌ಪಿ) ₹ 15 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಸಿ.ಸಿ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಸುಮಾರು ಒಂದು ದಶಕದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕ್ಷೇತ್ರ ಈಗ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಸಾಕಷ್ಟು ಯೋಜನೆ ಘೋಷಣೆ ಮಾಡಿ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ಯಾವುದೇ ಗ್ರಾಮದಲ್ಲಿ ಅಭಿವೃದ್ಧಿ ಕೆಲಸವಾಗಬೇಕಾದರೆ ನನ್ನ ಗಮನಕ್ಕೆ ತಂದರೆ ಹಣ ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕ್ಷೇತ್ರದಲ್ಲಿ ಈ ಹಿಂದೆ 10 ವರ್ಷ ಶಾಸಕರಾಗಿದ್ದವು ಇಲಾಖೆಗಳಿಂದ ಹಣ ಡ್ರಾ ಮಾಡಿದ್ದಾರೆಯೇ ಹೊರತು ಸ್ವಲ್ಪವೂ ಅಭಿವೃದ್ಧಿ ಕೆಲಸವಾಗಿಲ್ಲ. ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸ ಗಮನಿಸಿದರೆ ಬೇಸರವಾಗುತ್ತದೆ. ಅವರು ಇನ್ನೇನು ಕೆಲಸ ಮಾಡಿದ್ದಾರೆ?’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್ಥಿಕ ನೆರವಿಗೆ ಮನವಿ: ‘ತಾಲ್ಲೂಕಿನ ನರಸಾಪುರ, ವೇಮಗಲ್ ಸಮೀಪ ಅನೇಕ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಈ ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಅವರೂ ಒಪ್ಪಿಗೆ ನೀಡಿದ್ದಾರೆ’ ಎಂದು ವಿವರಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬರುತ್ತವೆ ಹೋಗುತ್ತವೆ. ಚುನಾವಣೆಯಲ್ಲಿ ಗೆದ್ದವರು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಬೇಕು. ಮುಖಂಡರು ರಾಜಕೀಯ ಮಾಡಿದರೆ ಜನ ತಕ್ಕ ಪಾಠ ಕಲಿಸಬೇಕು’ ಎಂದು ಸಲಹೆ ನೀಡಿದರು.

ಸ್ವಾಭಿಮಾನದಿಂದ ಬದುಕಿ: ‘ಗ್ರಾಮೀಣ ಪ್ರದೇಶದಲ್ಲಿ ಗುಂಪುಗಾರಿಕೆ ಮಾಡುವುದನ್ನು ಬಿಡಬೇಕು. ಜನ ಸಹ ಜಾತಿ, ಗುಂಪು, ಧರ್ಮದ ವಿಚಾರ ಬಿಟ್ಟು ಸ್ವಾಭಿಮಾನದಿಂದ ಬದುಕು ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಹರೀಶ್‌ಗೌಡ, ಸಂಘಟನಾ ಕಾರ್ಯದರ್ಶಿ ನಾಗೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !