ಬಡತನ ಮೆಟ್ಟಿ ವಿದ್ಯಾರ್ಥಿನಿಯರ ಸಾಧನೆ

ಶನಿವಾರ, ಏಪ್ರಿಲ್ 20, 2019
29 °C

ಬಡತನ ಮೆಟ್ಟಿ ವಿದ್ಯಾರ್ಥಿನಿಯರ ಸಾಧನೆ

Published:
Updated:
Prajavani

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ಬಡತನದ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಶೈಕ್ಷಣಿಕವಾಗಿ ಸಾಧನೆ ಮಾಡಿದ್ದಾರೆ.

ಆವಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರಾದ ಸಿರೀಷಾ ಮತ್ತು ಮಧುಮತಿ ಹೆಚ್ಚು ಅಂಕ ಪಡೆದು ಜಿಲ್ಲೆಯಲ್ಲಿ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮಂಜುನಾಥ್ ಮತ್ತು ವೀಣಾ ದಂಪತಿ ಪುತ್ರಿಯಾದ ಸಿರೀಷಾ ಓದಿನ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಚ್ಚು ಸಕ್ರಿಯವಾಗಿದ್ದಾರೆ. ಮಂಜುನಾಥ್ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಿ ಮಗಳನ್ನು ಓದಿಸಿದ್ದಾರೆ. ಸಿರೀಷಾ ತಂದೆಯ ಆಶಯಕ್ಕೆ ಧಕ್ಕೆ ಬಾರದಂತೆ ಕಲಾ ವಿಭಾಗದಲ್ಲಿ 544 ಅಂಕ ಗಳಿಸಿದ್ದಾರೆ. ಸಮಾಜ ವಿಜ್ಞಾನದಲ್ಲಿ 100 ಅಂಕ ಸಾಧನೆ ಮಾಡಿದ್ದಾರೆ. ಕನ್ನಡ 95, ಇಂಗ್ಲೀಷ್ 70, ಇತಿಹಾಸ 98, ಅರ್ಥಶಾಸ್ತ್ರ 85, ರಾಜ್ಯಶಾಸ್ತ್ರ 96 ಹಾಗೂ ಸಮಾಜ ಶಾಸ್ತ್ರದಲ್ಲಿ 100 ಅಂಕ ಗಳಿಸಿದ್ದಾರೆ.

‘ಐಎಎಸ್‌ ಅಧಿಕಾರಿ ಆಗಬೇಕು ಎನ್ನುವುದು ಜೀವನದ ಬಹು ದೊಡ್ಡ ಕನಸು. ಸರ್ಕಾರಿ ಸೇವೆಗೆ ಸೇರಿ ಜನಪರವಾಗಿ ಕೆಲಸ ಮಾಡುತ್ತೇನೆ’ ಎಂದು ಸಿರೀಷಾ ಹೇಳುತ್ತಾರೆ.

ಅಡ್ಡಿಯಾಗದ ಬಡತನ: ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಮಧುಮತಿ 539 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದ್ದು, ಇವರ ತಂದೆ ಮಾರ್ಕೊಂಡಪ್ಪ ಹಾಗೂ ತಾಯಿ ಮಂಜುಳಾ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಮಧುಮತಿ ಕನ್ನಡದಲ್ಲಿ 98, ಇಂಗ್ಲೀಷ್ 81, ಇತಿಹಾಸ 88, ಅರ್ಥಶಾಸ್ತ್ರ 83, ರಾಜ್ಯಶಾಸ್ತ್ರ 96 ಹಾಗೂ ಸಮಾಜ ಶಾಸ್ತ್ರದಲ್ಲಿ 93 ಅಂಕ ಗಳಿಸಿದ್ದಾರೆ.

‘ತಂದೆ ತಾಯಿ ಕೂಲಿ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ಅವರಿಗೆ ನನ್ನನ್ನು ಖಾಸಗಿ ಕಾಲೇಜಿಗೆ ಸೇರಿಸುವ ಶಕ್ತಿಯಿಲ್ಲ. ಸರ್ಕಾರಿ ಕಾಲೇಜಿನಲ್ಲೇ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸಿದ್ದೇನೆ. ನಾನು ವಕೀಲೆ ಆಗಬೇಕು ಎಂಬುದು ಪೋಷಕರ ಆಸೆ. ಅವರ ಆಶಯಕ್ಕೆ ಧಕ್ಕೆ ತರುವುದಿಲ್ಲ’ ಎಂದು ಮಧುಮತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಓದಿನಲ್ಲಿ ಮುಂದು: ವಿದ್ಯಾರ್ಥಿನಿಯರ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲೆ ಗಾಯಿತ್ರಮ್ಮ, ‘ಸಿರೀಷಾ ಮತ್ತು ಮಧುಮತಿ ಬಡ ಮಕ್ಕಳಾದರೂ ಓದಿನಲ್ಲಿ ಸದಾ ಮುಂದು. ಇವರು ತರಗತಿಗಳಿಗೆ ಎಂದೂ ಗೈರಾಗದೆ ಕಠಿಣ ಪರಿಶ್ರಮದಿಂದ ಹೆಚ್ಚು ಅಂಕ ಗಳಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !