ಬುಧವಾರ, ಜನವರಿ 22, 2020
18 °C

ಡಿಸಿಎಂ ಹುದ್ದೆ ರದ್ದು ಸಾಧ್ಯತೆ: ಅಬಕಾರಿ ಸಚಿವ ಎಚ್‌.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಹಾಲಿ ಇರುವ ಉಪ ಮುಖ್ಯಮಂತ್ರಿ ಹುದ್ದೆಗಳನ್ನೇ ತೆಗೆಯುವ ಸಾಧ್ಯತೆಯಿದೆ. ಹೊಸದಾಗಿ ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೆ ಶ್ರೀರಾಮುಲು ಅಥವಾ ರಮೇಶ್‌ ಜಾರಕಿಹೊಳಿ ಅವರಿಗೆ ಆ ಹುದ್ದೆ ಸಿಗಲಿದೆ’ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿ.22ರೊಳಗೆ ಖಂಡಿತ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಇದಕ್ಕೆ ಧನುರ್ಮಾಸ ಅಡ್ಡಿಯಾಗಲ್ಲ. ಜನರ ಕೆಲಸ ಆಗಿರುವುದರಿಂದ ಸಂಪುಟ ವಿಸ್ತರಣೆ ಬೇಗನೆ ನಡೆಯಲಿದೆ’ ಎಂದು ತಿಳಿಸಿದರು.

‘ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತಿರುವ ಎಚ್‌.ವಿಶ್ವನಾಥ್‌ ಹಾಗೂ ಎಂ.ಟಿ.ಬಿ ನಾಗರಾಜ್‌ ಅವರಿಗೂ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ಗೆದ್ದಿರುವ ಶಾಸಕರನ್ನು ಸಚಿವರನ್ನಾಗಿ ಮಾಡಲು ಮೊದಲ ಆದ್ಯತೆ ನೀಡಲಾಗುತ್ತದೆ. ಸೋತವರನ್ನು ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಲು ಕಾಲಾವಕಾಶ ಬೇಕು’ ಎಂದರು.

‘ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರೆಲ್ಲಾ ವಿಶ್ವನಾಥ್‌ ಹಾಗೂ ಎಂ.ಟಿ.ಬಿ ನಾಗರಾಜ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಸಹ ಶಿಫಾರಸು ಮಾಡಿದ್ದೇನೆ. ವಿಶ್ವನಾಥ್‌ ಮತ್ತು ಎಂ.ಟಿ.ಬಿ ನಾಗರಾಜ್‌ ಸೋತಿದ್ದರೂ ಗೆದ್ದಂತೆ. ಅವರಿಂದಲೇ ಸರ್ಕಾರ ರಚನೆಯಾಗಿದೆ’ ಎಂದು ತಿಳಿಸಿದರು.

‘ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದು ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟ ವಿಚಾರ. ಶರತ್ ಬಚ್ಚೇಗೌಡರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದೆಂದು ಎಂ.ಟಿ.ಬಿ ನಾಗರಾಜ್‌ ಷರತ್ತು ಹಾಕಿದ್ದಾರೆ. ಶರತ್‌ ಬಚ್ಚೇಗೌಡ ಅವರು ಚುನಾವಣೆಗೆ ಸ್ಪರ್ಧಿಸದಿದ್ದರೆ ಎಂ.ಟಿ.ಬಿ ನಾಗರಾಜ್‌ ಗೆಲ್ಲುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು