ಸಮೀಕ್ಷೆ ಮುಂದೂಡಿಕೆ: ಸಫಾಯಿ ಕರ್ಮಚಾರಿಗಳ ಧರಣಿ

7

ಸಮೀಕ್ಷೆ ಮುಂದೂಡಿಕೆ: ಸಫಾಯಿ ಕರ್ಮಚಾರಿಗಳ ಧರಣಿ

Published:
Updated:
Deccan Herald

ಕೋಲಾರ: ಸಫಾಯಿ ಕರ್ಮಚಾರಿಗಳ ವಿಶೇಷ ಮರು ಸಮೀಕ್ಷೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಮುಂದೂಡಿದ್ದರಿಂದ ಆಕ್ರೋಶಗೊಂಡ ಸಫಾಯಿ ಕರ್ಮಚಾರಿಗಳು ಇಲ್ಲಿನ ನಗರಸಭೆ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಅಭಿವೃದ್ದಿ ಸಂಸ್ಥೆ ಮತ್ತು ಜಿಲ್ಲಾಡಳಿತದ ವತಿಯಿಂದ ಟಿ.ಚನ್ನಯ್ಯ ರಂಗಮಂದಿರದ ಆವರಣದಲ್ಲಿ ಶುಕ್ರವಾರ ಸಫಾಯಿ ಕರ್ಮಚಾರಿಗಳ ವಿಶೇಷ ಮರು ಸಮೀಕ್ಷೆ ನಡೆಸಿ ಗುರುತಿನ ಚೀಟಿ ವಿತರಿಸಲು ಉದ್ದೇಶಿಸಲಾಗಿತ್ತು.

ಆದರೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಅಭಿವೃದ್ದಿ ಸಂಸ್ಥೆ ಅಧಿಕಾರಿಗಳು ಬಾರದ ಕಾರಣ ಅಂತಿಮ ಕ್ಷಣದಲ್ಲಿ ಸಮೀಕ್ಷೆ ಮುಂದೂಡಲಾಯಿತು. ಇದರಿಂದ ಅಸಮಾಧಾನಗೊಂಡ ಸಫಾಯಿ ಕರ್ಮಚಾರಿಗಳು, ‘ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ರದ್ದುಪಡಿಸಿದ್ದಾರೆ’ ಎಂದು ದೂರಿದರು.

‘ಸಾಕಷ್ಟು ಪೌರ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿಲ್ಲ. ಪೌರ ಕಾರ್ಮಿಕರ ಸಮೀಕ್ಷೆ ನಡೆದು ಹಲವು ವರ್ಷವಾಗಿದೆ. ಹೀಗಾಗಿ ಸರ್ಕಾರಿ ಸವಲತ್ತುಗಳಿಂದ ವಂಚಿತವಾಗಿದ್ದೇವೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳಿಗೆ ಪೌರ ಕಾರ್ಮಿಕರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಪೌರ ಕಾರ್ಮಿಕ ನರಸಿಂಹ ಆರೋಪಿಸಿದರು.

ವ್ಯವಸ್ಥಾಪಕಿಗೆ ತರಾಟೆ: ಧರಣಿನಿರತರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಪ್ರಸಾದ್‌ಬಾಬು ಮತ್ತು ವೆಂಕಟೇಶ್‌ಪತಿ, ‘ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಪೌರ ಕಾರ್ಮಿಕರಿಗೆ ಏಕೆ ಮಾಹಿತಿ ನೀಡಿಲ್ಲ?’ ಎಂದು ನಗರಸಭೆ ವ್ಯವಸ್ಥಾಪಕಿ ಸುಲ್ತಾನಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸುಲ್ತಾನಾ, ‘ಸಭೆ ಮುಂದೂಡಿರುವ ಬಗ್ಗೆ ಆರೋಗ್ಯ ನಿರೀಕ್ಷಕಿ ಮರಿಯಾ ಅವರು ಮಾಹಿತಿ ನೀಡಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಹೇಳಿದರು.

12ಕ್ಕೆ ಮುಂದೂಡಿಕೆ: ಬಳಿಕ ನಗರಸಭೆ ಆಯುಕ್ತ ಸತ್ಯನಾರಾಯಣ ಅವರು ಸಫಾಯಿ ಕರ್ಮಚಾರಿ ಹಣಕಾಸು ಅಭಿವೃದ್ದಿ ಸಂಸ್ಥೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಬಾಬುಲಾಲ್ ಅನಾರೋಗ್ಯದ ಕಾರಣ ಕಾರ್ಯಕ್ರಮವನ್ನು ಅ.12ಕ್ಕೆ ಮುಂದೂಡಿದ್ದಾರೆ ಎಂದು ಗೊತ್ತಾಯಿತು. ಸತ್ಯನಾರಾಯಣ ಈ ವಿಷಯ ತಿಳಿಸಿ ಧರಣಿನಿರತರ ಮನವೊಲಿಸಿದರು.

‘ಅ.12ರಂದು ಆಯೋಗದ ಅಧಿಕಾರಿಗಳು ಬರದಿದ್ದರೆ ನೀವೇ ಗುರುತಿನ ಚೀಟಿ ವಿತರಿಸಬೇಕು ಮತ್ತು ಮರು ಸಮೀಕ್ಷೆ ನಡೆಸಬೇಕು’ ಎಂದು ಧರಣಿನಿರತರು ಆಗ್ರಹಿಸಿದರು. ಇದಕ್ಕೆ ಒಪ್ಪಿದ ಸತ್ಯನಾರಾಯಣ, ‘ಅಧಿಕಾರಿಗಳು ಬಾರದಿದ್ದರೆ ಆಯೋಗದ ಅನುಮತಿ ಪಡೆದು ನಾವೇ ಕಾರ್ಯಕ್ರಮ ನಡೆಸುತ್ತೇವೆ’ ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !