ಗುರುವಾರ , ಮಾರ್ಚ್ 23, 2023
28 °C

ಶ್ರೀನಿವಾಸಪುರ: ಕುಸಿದ ಬೆಲೆ, ಕಂಗಾಲಾದ ಆಲೂಗಡ್ಡೆ ಬೆಳೆಗಾರರು

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನ ಆಲೂಗಡ್ಡೆ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಅಗೆದ ಗಡ್ಡೆಯನ್ನು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ವಿಸ್ತೀರ್ಣದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಮಳೆ ಸುರಿದ ಪರಿಣಾಮವಾಗಿ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಪ್ರಮಾಣ ಹೆಚ್ಚಿದೆ. ಆದ್ದರಿಂದ ಟೊಮೆಟೊ ಬೆಳೆಗೆ ಸೀಮತವಾಗಿದ್ದ ರೈತರೂ ಸಹ, ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ಆಲೂಗಡ್ಡೆ ಬೆಳೆಯಲು ಮೀಸಲಿಟ್ಟಿದ್ದಾರೆ. ಉತ್ತಮ ಹವಾಮಾನದಿಂದಾಗಿ ಅತ್ಯುತ್ತಮ ಫಸಲು ಬಂದಿದೆ.

ಆದರೆ ಉತ್ಪನ್ನದ ಬೆಲೆ ಪಾತಾಳಕ್ಕೆ ಇಳಿದಿದೆ. ಈ ಹಿಂದೆ 1 ಕೆಜಿ
ಆಲೂಗಡ್ಡೆ ₹50 ರಂತೆ ಮಾರಾಟವಾಗುತ್ತಿತ್ತು. ಈಗ ಸಗಟು ಬೆಲೆಯಲ್ಲಿ ಕೆಜಿಯೊಂದಕ್ಕೆ ₹9 ರಂತೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ಬೆಳೆಗೆ ಹಾಕಿದ ಬಂಡವಾಳವೂ ಕೈಗೆ ಬರುವುದಿಲ್ಲ ಎಂಬುದು ಬೆಳೆಗಾರರ ಅಳಲು.

‘ಬಿತ್ತನೆ ಗಡ್ಡೆಯನ್ನು ಕ್ವಿಂಟಲ್ ಒಂದಕ್ಕೆ ₹6200ರಿಂದ 10 ಸಾವಿರದ ವರೆಗೆ ನೀಡಿ ಖರೀದಿಸಿ ತಂದು ನಾಟಿ ಮಾಡಿದ್ದೇವೆ. ಈಗ ಕ್ವಿಂಟಲ್ ಗಡ್ಡೆ ಬೆಳೆ ₹800 ರಿಂದ 900 ರಂತೆ ಮಾರಾಟವಾಗುತ್ತಿದೆ. ಗಡ್ಡೆ ಅಗೆದ ಕೂಲಿ, ಸಾಗಾಣಿಕೆ ವೆಚ್ಚ, ಚೀಲದ ಬೆಲೆ ಹಾಗೂ ಕಮೀಷನ್ ಕಳೆದರೆ ಕೈಗೆ ಬರುವುದು ಏನೂ ಇರುವುದಿಲ್ಲ’ ಎಂದು ಆಲೂಗಡ್ಡೆ ಬೆಳೆಗಾರ ದಿಂಬಾಲ ರವಿ 'ಪ್ರಜಾವಾಣಿ'ಗೆ ತಿಳಿಸಿದರು.

ಕೆಲವು ರೈತರು ಗಡ್ಡೆಗೆ ಬೆಲೆ ಬಂದಾಗ ಮಾರುವ ಉದ್ದೇಶದಿಂದ ಶೀಥಲ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ಮುಂದಾಗಿದ್ದಾರೆ. ಸಮೀಪದಲ್ಲಿ ಶೀತಲ ಕೇಂದ್ರಗಳು ಇಲ್ಲದ ಪರಿಣಾಮವಾಗಿ ದೂರದ ಜಿಲ್ಲಾ ಕೇಂದ್ರಗಳಿಗೆ ಸರಕನ್ನು ಸಾಗಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕಾಗಿ ದುಬಾರಿ ಸಾಗಾಣಿಕಾ ವೆಚ್ಚ ನೀಡಬೇಕಾಗುತ್ತದೆ. ಜತೆಗೆ ಕ್ವಿಂಟಲ್ ಒಂದಕ್ಕೆ ಶೀಥಲ ಗೃಹ ಬಾಡಿಗೆಯಾಗಿ ₹150 ತೆರಬೇಕಾಗಿದೆ. ಇದು ರೈತರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

‘ಇಂಥ ಚಿಂತಾಜನಕ ಬೆಲೆ ಪರಿಸ್ಥಿತಿಯನ್ನು ನಾನೆಂದೂ ಕಂಡಿಲ್ಲ. ಆಲೂಗಡ್ಡೆ ಮಾತ್ರವಲ್ಲ. ಬೀನ್ಸ್, ಟೊಮೆಟೊ, ಬಜ್ಜಿ ಮೆಣಸಿನ ಕಾಯಿ, ಕ್ಯಾಪ್ಸಿಕಂ, ಬದನೆ ಕಾಯಿ, ಅಗಲ ಕಾಯಿ, ಹೀರೇಕಾಯಿ ಹೀಗೆ ಯಾವುದೇ ತರಕಾರಿಗೂ ಬೆಲೆ ಇಲ್ಲದಾಗಿದೆ. ಬೆಳೆಗಾರರು ಸಾಲದ ಸುಳಿಗೆ ಸಿಲುಕಿ ನಲುಗಬೇಕಾಗಿ ಬಂದಿದೆ’ ಎಂದು ಮುನಿರೆಡ್ಡಿ ಹೇಳಿದರು.

‘ಸರ್ಕಾರ ಬೆಲೆ ಕುಸಿತದಿಂದ ಕಂಗಾಲಾಗಿರುವ ತರಕಾರಿ ಬೆಳೆಗಾರರ ನೆರವಿಗೆ ಬರಬೇಕು. ಬೆಂಬಲ ಬೆಲೆ ಕೊಟ್ಟು ಖರೀದಿಸಬೇಕು. ಕೆಲವು ಕೃಷಿ ಉತ್ಪನ್ನಗಳಿಗೆ ಉಚಿತವಾಗಿ ಶೀಥಲ ಗೃಹ ಸೌಲಭ್ಯ ಒದಗಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆಗ್ರಹಿಸಿದರು.

‘ಬೆಲೆ ಕುಸಿತದ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಲ್ಲರೆ ವ್ಯಾಪಾರಿಗಳು ಹಿಂದಿನಂತೆಯೇ ಹೆಚ್ಚಿನ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. 'ಮಾರುಕಟ್ಟೆ ಮತ್ತು ಸಂತೆಗಳಲ್ಲಿ ಮಧ್ಯವರ್ತಿಗಳು ಹೆಚ್ಚಿನ ಬೆಲೆಗೆ ಮಾರಿ ಒಳ್ಳೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಕೈವಿಗೊಡುವುದಿಲ್ಲ’ ಎನ್ನುತ್ತಾರೆ ಚಲ್ದಿಗಾನಹಳ್ಳಿ ಗ್ರಾಮದ ಶ್ರೀನಿವಾಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು