ಮಂಗಳವಾರ, ಜನವರಿ 18, 2022
27 °C
ಸ್ವಉದ್ಯೋಗ ಆರಂಭಕ್ಕೆ ನೆರವಾಗಿ: ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ

ಬಡತನ ನಿರ್ಮೂಲನೆ: ಸಾಲ ಸೌಲಭ್ಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಗರ ಪ್ರದೇಶದ ಬಡ ಜನತೆ ಮತ್ತು ಗುಂಪುಗಳಿಗೆ ಕೌಶಲ, ತರಬೇತಿ, ಆಸಕ್ತಿ ಆಧರಿಸಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಿರು ಉದ್ದಿಮೆ ಸ್ಥಾಪಿಸಲು ಆರ್ಥಿಕ ನೆರವು ನೀಡುವ ಮೂಲಕ ಬಡತನ ನಿರ್ಮೂಲನೆಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್), ಜಿಲ್ಲಾ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮ ಕುರಿತು ಬ್ಯಾಂಕ್‌ ಅಧಿಕಾರಿಗಳಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ನಗರ ಪ್ರದೇಶದ ಬಡ ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ಅವರಲ್ಲಿ ಇರುವ ಕೌಶಲ ಪರಿಗಣಿಸಿ ಸ್ವಉದ್ಯೋಗ ಆರಂಭಿಸಲು ನೆರವಾದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಸಮಾಜದಲ್ಲಿ ಆರ್ಥಿಕ ತಾರತಮ್ಯ ಸಹ ನಿವಾರಣೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸ್ವಯಂ ಉದ್ಯೋಗ ಉದ್ದಿಮೆಗಳು ಮತ್ತು ಕಿರು ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ವ್ಯಕ್ತಿಗತ ಹಾಗೂ ಗುಂಪು ಉದ್ದಿಮೆ ಸ್ಥಾಪಿಸುವುದಕ್ಕೆ ಆರ್ಥಿಕ ನೆರವು ನೀಡಲು ಹಾಗೂ ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ದಿಗೆ ಅಗತ್ಯ ಸಾಲ ಸೌಲಭ್ಯ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶವಿದ್ದು, ಸ್ವಉದ್ಯೋಗ ಯೋಜನೆಗಳಿಗೆ ಸಾಲ ಮಂಜೂರಾತಿ ತ್ವರಿತಗೊಳಿಸಬೇಕು. ಅನಗತ್ಯ ಕಾರಣ ನೀಡಿ ನಿಜವಾದ ಉದ್ಯಮಿಗಳಿಗೂ ನೆರವು ಕಲ್ಪಿಸದೆ ಅಲೆದಾಡಿಸುವ ಬಗ್ಗೆ ದೂರುಗಳಿವೆ. ಉದ್ಯಮ ಸ್ಥಾಪಿಸುವ ಬದ್ಧತೆಯಿರುವವರ ಬಗ್ಗೆ ಸ್ಥಳೀಯವಾಗಿ ಪರಿಶೀಲಿಸಿ ಸಕಾಲಕ್ಕೆ ಸಾಲ ಸೌಲಭ್ಯ ಒದಗಿಸಬೇಕು’ ಎಂದರು.

ಬಡತನ ನಿರ್ಮೂಲನೆ: ‘ಕೌಶಲಾಭಿವೃದ್ಧಿ ಇಲಾಖೆಯ ಡೇ-ನಲ್ಮ್ ಯೋಜನೆಯಡಿ ನಗರ ಬಡತನ ನಿರ್ಮೂಲನೆಗೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ರೀತಿಯ ಸ್ವಯಂ ಉದ್ಯೋಗಗಳಿಗೆ ಮಾರುಕಟ್ಟೆಯಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ಸಿಎಂಕೆಕೆವೈ ಹಾಗೂ ಪಿಎಂಕೆಕೆವೈ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳು ಸರ್ಕಾರದ ಸ್ವಉದ್ಯೋಗ ಯೋಜನೆಗಳನ್ನು ಬ್ಯಾಂಕ್ ಸಾಲದ ಬೆಂಬಲದೊಂದಿಗೆ ಜಾರಿಗೊಳಿಸಬಹುದು’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ ಸಲಹೆ ನೀಡಿದರು.

‘ಆತ್ಮನಿರ್ಭರ ಭಾರತದ ಪ್ರಧಾನಿಯವರ ಆಶಯದಂತೆ ಉದ್ಯೋಗ ಸ್ಥಾಪನೆಗೆ ಒತ್ತು ನೀಡುವ ಮೂಲಕ ಸಮಾಜದಲ್ಲಿನ ಬಡತನ ಹೋಗಲಾಡಿಲು ಕ್ರಮ ವಹಿಸಬೇಕು. ಸಾಲ ಸೌಲಭ್ಯ ಒದಗಿಸಿದರೆ ಸ್ವಾವಲಂಬನೆಯ ಜತೆಗೆ ಮತ್ತಷ್ಟು ನಿರುದ್ಯೋಗಿಗಳಿಗೂ ಉದ್ಯೋಗಾವಕಾಶ ಸಿಗಲಿದೆ’ ಎಂದು ಹೇಳಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ರಾಪುರಿ, ಕೆಜಿಎಫ್ ನಗರಸಭೆ ಸಮುದಾಯ ಸಂಘಟಕ ಬಿ.ಶಿವಕುಮಾರ್, ಬಂಗಾರಪೇಟೆ ಪುರಸಭೆ ಸಮುದಾಯ ಸಂಘಟನಾಧಿಕಾರಿ ವೆಂಕಟೇಶ್, ಮಾಲೂರು ಪುರಸಭೆ ಸಂಘಟನಾಧಿಕಾರಿ ಮಂಜುನಾಥ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು