ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಬಡತನ ನಿರ್ಮೂಲನೆ ಅಸಾಧ್ಯ: ರಾಮದಾಸ್ ಅಠವಳೆ ಟೀಕೆ

ಚುನಾವಣಾ ಪ್ರಚಾರದಲ್ಲಿ ಆರ್‌ಪಿಐ ರಾಷ್ಟೀಯ ಅಧ್ಯಕ್ಷ
Last Updated 15 ಏಪ್ರಿಲ್ 2019, 20:28 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರು ಹಾಗೂ ರೈತರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಮತದಾರರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಷ್ಟೀಯ ಅಧ್ಯಕ್ಷ ರಾಮದಾಸ್ ಅಠವಳೆ ಮನವಿ ಮಾಡಿದರು.

ಇಲ್ಲಿ ಸೋಮವಾರ ನಡೆದ ಪಕ್ಷದ ಅಭ್ಯರ್ಥಿ ವೆಂಕಟೇಶಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಸಂಸದ ಕೆ.ಎಚ್.ಮುನಿಯಪ್ಪ ಅವರು ಸಂಸತ್‌ ಕಲಾಪದಲ್ಲಿ ಕ್ಷೇತ್ರದ ಸಮಸ್ಯೆಗಳ ವಿಚಾರವಾಗಿ ಧ್ವನಿ ಎತ್ತಿದನ್ನು ನೋಡಿಯೇ ಇಲ್ಲ’ ಎಂದು ದೂರಿದರು.

‘ಕಾಂಗ್ರೆಸ್ ಪಕ್ಷವು ರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದೆ. ಆದರೆ, ರಾಹುಲ್‌ ಗಾಂಧಿ ಸಂಸದರಾಗಲು ನಾಲಾಯಕ್. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಓಟ್ ಬ್ಯಾಂಕ್‌ಗಾಗಿ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತದೆ. ಕಾಂಗ್ರೆಸ್‌ನಿಂದ ಬಡತನ ನಿರ್ಮೂಲನೆ ಸಾಧ್ಯವಿಲ್ಲ’ ಎಂದು ಟೀಕಿಸಿದರು.

‘7 ದಶಕದ ಕಾಲ ದೇಶ ಆಳಿದ ಕಾಂಗ್ರೆಸ್ ಬಡತನ ನಿರ್ಮೂಲನೆ ವಿಷಯನ್ನು ಪಕ್ಷದ ಘೋಷಣೆಯಾಗಿ ಮಾಡಿಕೊಂಡಿದೆ. ಮತದಾರರೇ ಆ ಪಕ್ಷಕ್ಕೆ ಹಿಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ ಮುಖಂಡರು ಇನ್ನಾದರೂ ಎಚ್ಚೆತ್ತುಕೊಂಡು ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕುತಂತ್ರ ಬಿಡಲಿ’ ಎಂದು ಕುಟುಕಿದರು.

ಮೋದಿಗೆ ಬೆಂಬಲ: ‘ಬಿಜೆಪಿಯ ನರೇಂದ್ರ ಮೋದಿಯವರು ಕೇವಲ ಮೇಲ್ಜಾತಿಯವರ ಮತ ಪಡೆದು 280ಕ್ಕೂ ಹೆಚ್ಚು ಸೀಟು ಗಳಿಸಿ ಪ್ರಧಾನಿಯಾಗಲಿಲ್ಲ. ಅವರಿಗೆ ಎಲ್ಲಾ ವರ್ಗದವರ ಬೆಂಬಲ ಸಿಕ್ಕಿದೆ. ಈ ಬಾರಿಯೂ ಆರ್‌ಪಿಐ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಪಕ್ಷವು ಮೋದಿ ಅವರನ್ನು ಬೆಂಬಲಿಸುತ್ತದೆ’ ಎಂದು ಘೋಷಿಸಿದರು.

‘ಮೀಸಲಾತಿ ಸೌಲಭ್ಯವನ್ನು ರಕ್ಷಣಾ ಇಲಾಖೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದರೂ ಕಾಂಗ್ರೆಸ್ ಸರ್ಕಾರದಲ್ಲಿ ಸಾಧ್ಯವಾಗಲಿಲ್ಲ. ದೇಶ ಕಾಪಾಡುವಲ್ಲಿ ಹಾಗೂ ಭದ್ರತೆ ವಿಚಾರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಕ್ಷವು ಎನ್‌ಡಿಎ ವಿರುದ್ಧವೂ ಹೋರಾಟ ನಡೆಸಲು ಸಿದ್ಧವಿದೆ’ ಎಂದು ಸ್ಪಷ್ಟಪಡಿಸಿದರು.

ಕಳ್ಳೆತ್ತುಗಳು: ‘ಮುನಿಯಪ್ಪ ಮತ್ತು ವೀರಪ್ಪ ಮೊಯಿಲಿ ಅವಿಭಜಿತ ಕೋಲಾರ ಜಿಲ್ಲೆಯ ಕಳ್ಳೆತ್ತುಗಳು ಇದ್ದಂತೆ’ ಎಂದು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಲೇವಡಿ ಮಾಡಿದರು.

‘ಮುನಿಯಪ್ಪ ಮತ್ತು ಮೊಯಿಲಿಯಿಂದ ಅವಳಿ ಜಿಲ್ಲೆಗಳಿಗೆ ಯಾವುದೇ ಅನುಕೂಲ ಆಗಿಲ್ಲ. ಈ ಇಬ್ಬರೂ ಸುಳ್ಳು ಹೇಳಿಕೊಂಡೇ ಚುನಾವಣೆಯಲ್ಲಿ ಪ್ರತಿ ಬಾರಿ ಗೆಲುವು ಸಾಧಿಸುತ್ತಿದ್ದಾರೆ. ಹಿಂದಿನ ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆ ಅನುಷ್ಠಾನ, ರೈಲ್ವೇ ಕೋಚ್ ಕಾರ್ಖಾನೆ ಸ್ಥಾಪನೆ ಭರವಸೆ ನೀಡಿದ್ದರು. ಈಗ ಅವರಿಗೆ ಹಳೇ ಭರವಸೆ ನೆನಪಿಗೂ ಬರುತ್ತಿಲ್ಲ. ಇಂತಹವರನ್ನು ಮತ್ತೆ ಚುನಾಯಿಸಬೇಕೇ? ಎಂದು ಪ್ರಶ್ನಿಸಿದರು.

ಪಕ್ಷದ ಅಭ್ಯರ್ಥಿ ವೆಂಕಟೇಶಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT