ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕ ಪದ್ಧತಿಗೆ ಬಡತನ ಕಾರಣ

ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್‌ ಶೋಭಿತಾ ಅಭಿಪ್ರಾಯ
Last Updated 1 ಏಪ್ರಿಲ್ 2021, 12:28 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಬಡತನವೇ ಮೂಲ ಕಾರಣ’ ಎಂದು ತಹಶೀಲ್ದಾರ್‌ ಶೋಭಿತಾ ಅಭಿಪ್ರಾಯಪಟ್ಟರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಂಬಂಧ ಇಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಬಾಲ್ಯಾವಸ್ಥೆ, ಯೌವ್ವನ, ವೃದ್ಧಾಪ್ಯ ಮತ್ತು ವಾನಪ್ರಸ್ಥ ಎಂಬ 4 ಘಟ್ಟಗಳಿವೆ. ಇದರಲ್ಲಿ ಬಾಲ್ಯಾವಸ್ಥೆಯು ಪ್ರಮುಖ ಘಟ್ಟ’ ಎಂದರು.

‘ಅನಕ್ಷರಸ್ಥ ಮತ್ತು ಬಡ ಕುಟುಂಬಗಳಲ್ಲಿ ಬಾಲಕಾರ್ಮಿಕ ಪದ್ಥತಿ ಹೆಚ್ಚಾಗಿ ಕಾಣಬಹುದು. ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ–1986, ಕೇಂದ್ರ ಕಾಯ್ದೆ 61 ಕಲಂ 17ರ ಅಡಿಯಲ್ಲಿ ಆರರಿಂದ 14 ವರ್ಷ ವಯೋಮಾನದೊಳಗಿನ ಮಕ್ಕಳನ್ನು ಕಾರ್ಖಾನೆ ಅಥವಾ ಇತರೆ ಕೆಲಸಗಳಿಗೆ ಬಳಸಿಕೊಳ್ಳುವುದು ಅಪರಾಧ’ ಎಂದು ಎಚ್ಚರಿಕೆ ನೀಡಿದರು.

‘ಕೇಂದ್ರ ಸರ್ಕಾರವು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ 2016ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದಿತು. ಇದರ ಪ್ರಕಾರ 1 ವರ್ಷದಿಂದ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೈಗಾರಿಕೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಂಡರೆ ಅವರಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಬಡ ಪೋಷಕರು ಆರ್ಥಿಕ ಸಂಕಷ್ಟದ ಕಾರಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಿ ದುಡಿಮೆಗೆ ಕಳುಹಿಸುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಬದುಕು ಹಾಳಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕು. ಸಮಾಜದಲ್ಲಿ ಎಲ್ಲಾದರೂ ಬಾಲ ಕಾರ್ಮಿಕರನ್ನು ಕಂಡರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ತಂಡ ರಚನೆ

‘ಬಾಲಕಾರ್ಮಿಕ ಪದ್ಧತಿ ತಡೆಗಾಗಿ ವಿವಿಧ ಇಲಾಖೆ ಮುಖ್ಯಸ್ಥರನ್ನು ಒಳಗೊಂಡ ತಂಡಗಳನ್ನು ರಚಿಸಸಲಾಗಿದೆ. ಈ ತಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಳಿಸಿ ಶಾಲೆಗಳಿಗೆ ದಾಖಲು ಮಾಡಬಹುದು’ ಎಂದು ಕಿವಿಮಾತು ಹೇಳಿದರು.

‘ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿರುವ ಹೆಚ್ಚಿನ ಮಕ್ಕಳು ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳಿಗೆ ಸೇರಿದ್ದಾರೆ. ವಲಸೆ ಕಾರ್ಮಿಕರು ವಿವಿಧ ರಾಜ್ಯಗಳಿಂದ ಬಂದು ಇಲ್ಲಿನ ಇಟ್ಟಿಗೆ ಕಾರ್ಖಾನೆ, ಕೋಳಿ ಫಾರಂ, ಕ್ವಾರಿಗಳಲ್ಲಿ ಕಡೆ ಕೆಲಸ ಮಾಡುತ್ತಿವೆ. ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಸ್ಥಳೀಯವಾಗಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡಬೇಕು’ ಎಂದು ಸೂಚಿಸಿದರು.

‘ಸಂವಿಧಾನವು ಬಾಲ ಕಾರ್ಮಿಕ ಪದ್ಥತಿ ತಡೆಗೆ ಅನೇಕ ಕಾನೂನು ನೀಡಿದೆ. 1986ರಲ್ಲಿ ಬಾಲಕಾರ್ಮಿಕ ಪದ್ಥತಿ ವಿರುದ್ಧ ಕಾನೂನು ಜಾರಿಯಾಯಿತು. ಈ ಕಾಯ್ದೆಯ 21ಎ ವಿಧಿ ಪ್ರಕಾರ 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಇದು ಸರ್ಕಾರದ ಜವಾಬ್ದಾರಿ. ವಲಸೆ ಬಂದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಬಹುದು’ ಎಂದರು.

ಶಿಕ್ಷಣ ಇಲಾಖೆ ಸಂಯೋಜಕ ಆರ್.ಶ್ರೀನಿವಾಸನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸವಿತಾ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ, ಮಹಿಳಾ ಠಾಣೆ ಎಸ್‌ಐ ಹೇಮಲತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ, ನಗರಸಭೆ ಪರಿಸರ ಎಂಜಿನಿಯರ್ ಪುನೀತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT