ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆ ಬಲಗೊಂಡರೆ ಪಕ್ಷಕ್ಕೆ ಅಧಿಕಾರ: ಕೆಪಿಸಿಸಿ ವೀಕ್ಷಕ ಗೋವಿಂದರಾಜು ಕಿವಿಮಾತು

ಬೂತ್ ಮಟ್ಟದ ಏಜೆಂಟರಿಗೆ ಕೆಪಿಸಿಸಿ ವೀಕ್ಷಕ ಗೋವಿಂದರಾಜು ಕಿವಿಮಾತು
Last Updated 29 ಅಕ್ಟೋಬರ್ 2020, 15:17 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಗೊಳ್ಳಬೇಕು. ಸಂಘಟನೆ ಬಲವಾಗಿದ್ದರೆ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ಆಗ ಕಾರ್ಯಕರ್ತರಿಗೂ ಅಧಿಕಾರ ಸಿಗುತ್ತದೆ. ಯಾವುದೇ ಚುನಾವಣೆ ಎದುರಾದರೂ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ವೀಕ್ಷಕ ಕೆ.ಗೋವಿಂದರಾಜು ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟರ ಸಭೆಯಲ್ಲಿ ಮಾತನಾಡಿ, ‘ಪಕ್ಷದ ಸೂಚನೆಯಂತೆ ಶೀಘ್ರವೇ ಬೂತ್ ಮಟ್ಟದ ಏಜೆಂಟರ ನೇಮಕ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘ಪ್ರತಿ ಚುನಾವಣೆ ವೇಳೆ ಮತದಾರರ ಹೆಸರು ಕೈ ಬಿಟ್ಟು ಹೋಗಿರುತ್ತದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಆ ಸಮುದಾಯದ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗುವಂತೆ ಪ್ರತಿಪಕ್ಷದವರು ಸಂಚು ಮಾಡುತ್ತಾರೆ. ಈ ಸಂಗತಿ ತಿಳಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೂತ್ ಮಟ್ಟದ ಏಜೆಂಟರನ್ನು ನೇಮಿಸುವಂತೆ ಸೂಚಿಸಿದ್ದಾರೆ’ ಎಂದರು.

‘ಬೂತ್ ಮಟ್ಟದ ಏಜೆಂಟರು ಆಯಾ ಬೂತ್ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಆಗುವಂತೆ ಮಾಡಬೇಕು. ಮತದಾರರು ಮೃತಪಟ್ಟಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಸಬೇಕು. ಇದರಿಂದ ಮತ ಬ್ಯಾಂಕ್‌ ಛಿದ್ರವಾಗದಂತೆ ಮಾಡಲು ನೆರವಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬೂತ್‌ ಮಟ್ಟದ ಏಜೆಂಟರ ನೇಮಕ ಪ್ರಕ್ರಿಯೆ ಶೇ 50ರಷ್ಟು ಪೂರ್ಣಗೊಂಡಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬೂತ್‌ ಮಟ್ಟದ ಏಜೆಂಟರ ಪಟ್ಟಿ ಸಿದ್ಧವಾಗಿರದ ತಾಲ್ಲೂಕುಗಳಲ್ಲಿ 2 ದಿನದೊಳಗೆ ಪಟ್ಟಿ ಪೂರ್ಣಗೊಳಿಸಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ವ್ಯತ್ಯಾಸವಿದೆ: ‘ಬೂತ್ ಏಜೆಂಟ್ ಮತ್ತು ಬೂತ್ ಮಟ್ಟದ ಏಜೆಂಟರಿಗೆ ವ್ಯತ್ಯಾಸವಿದೆ. ಬೂತ್ ಏಜೆಂಟರು ಮತದಾನದ ದಿನಕ್ಕೆ ಮಾತ್ರ ಸೀಮಿತ. ಬೂತ್ ಮಟ್ಟದ ಏಜೆಂಟರು ಕೇಂದ್ರ ಚುನಾವಣಾ ಆಯೋಗ ಮತದಾರರ ಸೇರ್ಪಡೆಗೆ ಸೂಚನೆ ನೀಡಿದಾಗ 18 ವರ್ಷ ತುಂಬಿದ ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಿಸುವ, ಮೃತ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಸುವ, ಮತದಾರರು ಬೇರೆಡೆ ಹೋಗಿದ್ದರೆ ಅಂತಹವರ ಹೆಸರು ತೆಗೆಸುವ ಕೆಲಸ ಮಾಡುತ್ತಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌ ವಿವರಿಸಿದರು.

‘ಬೂತ್‌ ಮಟ್ಟದ ಏಜೆಂಟರು ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತದಾರರ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ತೀವ್ರ ಸ್ಪರ್ಧೆಯಿರುವ ಭಾಗಗಳಲ್ಲಿ ಆಯಾ ಮುಖಂಡರು ಮಾತ್ರ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಈ ಕೆಲಸ ಆಗಬೇಕೆಂದು ಕೆಪಿಸಿಸಿ ಅಧ್ಯಕ್ಷರು ಬೂತ್ ಮಟ್ಟದ ಏಜೆಂಟರನ್ನು ನೇಮಿಸುವಂತೆ ಸೂಚಿಸಿದ್ದಾರೆ. ಇದರಿಂದ ಪಕ್ಷಕ್ಕೆ ಅನುಕೂಲ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪಟ್ಟಿ ಅಂತಿಮ: ‘ಜಿಲ್ಲೆಯ ಕೋಲಾರ, ಬಂಗಾರಪೇಟೆ ಮತ್ತು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದ ಏಜೆಂಟರ ಪಟ್ಟಿ ಅಂತಿಮಗೊಂಡಿದೆ. ಮಾಲೂರೂ ಕ್ಷೇತ್ರದ ಪಟ್ಟಿ ಸಹ ಸಿದ್ಧವಾಗಿದೆ. ಶ್ರೀನಿವಾಸಪುರ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಪಟ್ಟಿಯನ್ನು 2 ದಿನದಲ್ಲಿ ಅಂತಿಮಗೊಳಿಸುತ್ತೇವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಿವರಿಸಿದರು.

‘ಬೂತ್‌ ಮಟ್ಟದ ಏಜೆಂಟರು ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗುತ್ತದೆ’ ಎಂದು ಹೇಳಿದರು.

ಮಾಜಿ ಸಚಿವ ನಿಸಾರ್ ಅಹಮ್ಮದ್‌, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾಂಗ್ರೆಸ್‌ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್‌ಟಿ ಘಟಕದ ಅಧ್ಯಕ್ಷ ನಾಗರಾಜ್, ಕಿಸಾನ್ ಖೇತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅತಾವುಲ್ಲಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT